ನ್ಯೂಸ್

ಲೈವ್ ರಿಪೋರ್ಟಿಂಗ್ ವೇಳೆ ವರದಿಗಾರ್ತಿಯ ಖಾಸಗಿ ಅಂಗ ಸ್ಪರ್ಶಿಸಿದ ಅಪರಿಚಿತನಿಂದ ದರ್ಪದ ಮಾತು!

ಮ್ಯಾಡ್ರಿಡ್​: ವರದಿಗಾರ್ತಿಯೊಬ್ಬಳು ಲೈವ್​ ರಿಪೋರ್ಟ್​ ಮಾಡುವಾಗ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಆಕೆಯ ಖಾಸಗಿ ಅಂಗವನ್ನು ಸ್ಪರ್ಶಿಸುವ ಮೂಲಕ ಅನುಚಿತವಾಗಿ ವರ್ತಿಸಿರುವ ಘಟನೆ ಸ್ಪೇನ್​ನಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ಪತ್ರಕರ್ತೆ ಇಸಾ ಬಲ್ಲಾಡೋ ಅವರು ಸ್ಪೇನ್​ ರಾಜಧಾನಿ ಮ್ಯಾಡ್ರಿಡ್​ನಲ್ಲಿ ನಡೆದ ದರೋಡೆಯ ಬಗ್ಗೆ ಲೈವ್​ ರಿಪೋರ್ಟ್​ ನೀಡುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಅಪರಿಚಿತನೊಬ್ಬ ಆಕೆಯ ನಿತಂಬವನ್ನು ಸ್ಪರ್ಶಿಸಿದ್ದಾನೆ. ಇದರಿಂದ ಇಸಾ ಮುಜುಗರಕ್ಕೆ ಒಳಗಾಗುತ್ತಾರೆ. ಬಳಿಕ ಇಸಾ ಅವರು ಯಾವ ಟೆಲಿವಿಷನ್​ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಅಪರಿಚಿತ ಯತ್ನಿಸುತ್ತಾನೆ. ಇದಕ್ಕೆ ಪ್ರತಿಕ್ರಿಯಿಸುವ ಇಸಾ, ನಾವು ಯಾವ ಟಿವಿ ಸ್ಟೇಷನ್ ಎಂದು ತಿಳಿದುಕೊಳ್ಳಲು ನೀವು ಬಯಸುತ್ತೀರಿ, ನೀವು ನಿಜವಾಗಿಯೂ ನನ್ನನ್ನು ಮುಟ್ಟಬೇಕೆ? ನಾನು ಲೈವ್ ರಿಪೋರ್ಟ್ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾರೆ.

ಇದಕ್ಕೆ ಪ್ರತಿಕ್ರಿಯೆ ನೀಡುವ ಆ ವ್ಯಕ್ತಿ ನಾನೇನು ತಪ್ಪು ಮಾಡಿಲ್ಲ. ನಾನು ನಿಮ್ಮನ್ನು ಮುಟ್ಟಿಯೇ ಇಲ್ಲ ಎಂದು ಹೇಳುತ್ತಾನೆ. ನಾನು ನಿಮ್ಮದನ್ನು ಮುಟ್ಟಲು ಬಯಸಲಿಲ್ಲ. ನಾನು ನಿಮ್ಮನ್ನು ಗೌರವಿಸುತ್ತೇನೆ, ನಿಮಗೆ ಗೊತ್ತಿದೆ, ನಾನು ನಿಮ್ಮದನ್ನು ಮುಟ್ಟುವುದಿಲ್ಲ ಎಂದು ಮತ್ತೆ ಮತ್ತೆ ಹೇಳುವ ಮೂಲಕ ಉದ್ಧಟತನ ಮೆರೆದಿದ್ದಾನೆ. ಈ ವೇಳೆ ನನಗೆ ಕೆಲಸ ಮಾಡಲು ಬಿಡಿ ಎಂದು ಪತ್ರಕರ್ತೆ ಇಸಾ ಹೇಳುವುದು ವಿಡಿಯೋದಲ್ಲಿ ರೆಕಾರ್ಡ್​ ಆಗಿದೆ.

ಇತ್ತ ಸ್ಟುಡಿಯೋದಿಂದ ವಿಡಿಯೋ ವೀಕ್ಷಣೆ ಮಾಡುತ್ತಿದ್ದ ಟಿವಿ ನಿರೂಪಕ ಮಧ್ಯಪ್ರವೇಶಿಸಿ, ಆತ ನಿನ್ನನ್ನು ಸ್ಪರ್ಶಿಸಿದನೇ? ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಇಸಾ, ನಾಚಿಕೆಯಿಂದ ಹೌದು ಎಂದು ಹೇಳುತ್ತಾರೆ. ಇದರಿಂದ ಆಕ್ರೋಶಗೊಳ್ಳುವ ನಿರೂಪಕ ಆತನನ್ನು ಕ್ಯಾಮೆರಾ ಮುಂದೆ ಬರುವಂತೆ ಹೇಳುತ್ತಾರೆ. ಈ ವೇಳೆ ಆತ ನಾನೇನು ತಪ್ಪು ಮಾಡಿಲ್ಲ ಎಂದು ಮತ್ತೆ ಹೇಳುತ್ತಾನೆ

ಕೊನೆಗೆ ವರದಿಗಾರ್ತಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಸ್ಪೇನ್​ ಪೊಲೀಸರು ಬಂಧಿಸಿ ಕರೆದೊಯ್ದರು. (ಏಜೆನ್ಸೀಸ್​)