ನ್ಯೂಸ್

ಚಪ್ಪಲಿಗೋಸ್ಕರ ಹರಿಯುವ ನದಿಗಿಳಿದ ಯುವಕ ಸಾವು! ನೀರಿನಲ್ಲಿ ಕೊಚ್ಚಿಹೋದವನಿಗೆ ಸಿಗಲಿಲ್ಲ ಸ್ನೇಹಿತರ ಸಹಾಯ | Swept Away

ಮೋಹನ್​ ಶೆಟ್ಟಿ

Swept Away: ಹರಿಯುತ್ತಿದ್ದ ನದಿಯಲ್ಲಿ ಸಿಲುಕಿಕೊಂಡ ಚಪ್ಪಲಿಗೋಸ್ಕರ ನೀರಿಗಿಳಿದ ಯುವಕನೊಬ್ಬ ಕೊಚ್ಚಿಹೋದ ಘಟನೆ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ವರದಿಯಾಗಿದೆ. ಸ್ನೇಹಿತ ನೀರಿನಲ್ಲಿ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದರೂ ಸಹಾಯಕ್ಕೆ ಬಾರದ ಹುಡುಗರು, ಘಟನೆಯ ದೃಶ್ಯವನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆಹಿಡಿದು, ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಮೃತ ಯುವಕನನ್ನು ಆಯುಷ್ ಎಂದು ಗುರುತಿಸಲಾಗಿದೆ. ಆಯುಷ್​ ತನ್ನ ಐವರು ಸ್ನೇಹಿತರೊಂದಿಗೆ ಪರೇವಾ ಖೋಹ್ ಎಂಬ ಪ್ರವಾಸಿ ತಾಣಕ್ಕೆ ಹೋಗಿದ್ದ. ವಿಹಾರದ ಸಮಯದಲ್ಲಿ, ಆತನ ಒಂದು ಚಪ್ಪಲಿ ನದಿಗೆ ಜಾರಿ ಬಿದ್ದಿತು. ಈ ವೇಳೆ ಹೇಗಾದರೂ ಚಪ್ಪಲಿಯನ್ನು ಮರುಪಡೆಯಲು ಹರಸಾಹಸ ಪಟ್ಟ ಯುವಕ, ಇನ್ನೇನು ಚಪ್ಪಲಿ ಸಿಕ್ಕಿತು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಆಯಾತಪ್ಪಿ ನೀರಿಗೆ ಬಿದ್ದು, ಕೊಚ್ಚಿ ಹೋಗಿದ್ದ. ಆತನ ಸುಳಿವು ಸಿಗದ ಹಿನ್ನಲೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ರಕ್ಷಣಾ ಪಡೆಯ ಸಹಾಯದಿಂದ ಯುವಕನಿಗಾಗಿ ಹುಡುಕಾಡಿದ್ದಾರೆ. ಇಂದು ಆತನ ಮೃತದೇಹ ಪತ್ತೆಯಾಗಿದ್ದು, ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವಿಷಯ ತಿಳಿದ ಆಯುಷ್​ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ,(ಏಜೆನ್ಸೀಸ್).