ಇಂದೋರ್: ಸಾಕುನಾಯಿಗಳ ವಿಚಾರವಾಗಿ ಶುರುವಾದ ಗಲಾಟೆಯೂ ಇಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಧ್ಯಪ್ರದೇಶದ ಇಂದೋರ್ನ ಕೃಷ್ಣಭಾಗ್ ಕಾಲೋನಿಯಲ್ಲಿ ನಡೆದಿದೆ. ಘಟನೆಯಲ್ಲಿ ಆರು ಮಂದಿ ಗುಂಡೇಟು ತಿಂದು ಗಂಭೀರವಾಗಿ ಗಾಯಗೊಂಡಿದ್ದಾರೆ.
ವಿಮಲ್ ಅಚಲಾ(35), ರಾಹುಲ್ ವರ್ಮಾ(27) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ಪ್ರಕರಣ ಸಂಬಂಧ ಪೊಲೀಸರು ರಾಜ್ಪಾಲ್ ಸಿಂಗ್ ರಾಜಾವತ್ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಇಂದೋರ್ನ ಕೃಷ್ಣಭಾಗ್ ಕಾಲೋನಿಯಲ್ಲಿ ರಾಜ್ಪಾಲ್ ಹಾಗೂ ವಿಮಲ್ ತಮ್ಮ ಸಾಕು ನಾಯಿಯನ್ನು ರಾತ್ರಿ 11 ಘಂಟೆ ಸುಮಾರಿಗೆ ವಾಕಿಂಗ್ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಎರಡು ನಾಯಿಗಳು ಒಂದನ್ನೊಂದು ನೋಡಿ ಬೊಗಳಲು ಶುರು ಮಾಡಿದ್ದು, ಶ್ವಾನಗಳ ಮಾಲೀಕರ ನಡುವೆ ವಾಗ್ವಾದ ಶುರುವಾಗಿದೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತಿದ್ದಂತೆ ಸಿಟ್ಟಿಗೆದ್ದ ಆರೋಪಿ ರಾಜ್ಪಾಲ್ ತನ್ನ ಮನೆಗೆ ತೆರಳಿ 12 ಬೋರ್ ರೈಫಲ್ ಮೂಲಕ ಅಚಲ್ ಹಾಗೂ ಅವರ ಜೊತೆಗಿದ್ದ ರಾಹುಲ್ ಮೇಲೆ ಗುಂಡು ಹಾರಿಸಿದ್ದಾನೆ. ಬಳಿಕ ಗಲಾಟೆ ಬಿಡಿಸಲು ಬಂದವರ ಮೇಲೂ ಆರೋಪಿ ಗುಂಡು ಹಾರಿಸಿದ್ದಾನೆ. ಗಾಯಗೊಂಡಿರುವವರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.
ಪ್ರಕರಣ ಸಂಬಂಧ ಪೊಲೀಸರು ಆರೋಪಿ ರಾಜ್ಪಾಲ್, ಆತನ ಮಗ ಸುಧೀರ್ ಹಾಗೂ ಅವರ ಸಂಬಂಧಿಕ ಶುಭಂ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ ಆರೋಪಿ ಬಳಿ ಇದ್ದ 12 ಬೋರ್ ರೈಫಲ್ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ತಪ್ಪಿತಸ್ಥರನ್ನು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.