ನ್ಯೂಸ್

ತಾನು ಪ್ರೀತಿಸಿದ್ದ ಯುವತಿ ಪತಿಗೆ ಸ್ಪೀಕರ್​ ಬಾಂಬ್ ಗಿಫ್ಟ್​​! ಪಾಗಲ್​ ಪ್ರೇಮಿಯ ಭಯಾನಕ ಸ್ಕೆಚ್ ಬಟಾಬಯಲು| Bomb Speaker

Bomb Speaker: ಮ್ಯೂಸಿಕ್ ಸಿಸ್ಟಮ್ ಸ್ಪೀಕರ್‌ನಲ್ಲಿ ಸ್ಫೋಟಗೊಳ್ಳುವ ಸಾಧನವನ್ನು ಅಳವಡಿಸಿ, ಅದನ್ನು ತಾನು ಪ್ರೀತಿಸುತ್ತಿದ್ದ ಯುವತಿಯ ಪತಿಗೆ ಕಳುಹಿಸಿಕೊಟ್ಟ ಪಾಗಲ್ ಪ್ರೇಮಿಯ ಕಿಲ್ಲಿಂಗ್ ಸ್ಕೆಚ್ ಇದೀಗ ಬಟಾಬಯಲಾಗಿದೆ. ಈ​ ಘಟನೆ ಛತ್ತೀಸ್‌ಗಢದಲ್ಲಿ ವರದಿಯಾಗಿದೆ.

ಕೊಲೆಗೈಯಲು ಗೂಗಲ್ ಸರ್ಚ್​!

ಆರೋಪಿ ಆನ್‌ಲೈನ್ ಟ್ಯುಟೋರಿಯಲ್‌ಗಳನ್ನು ವೀಕ್ಷಿಸಿ, ಇಂತಹ ಸ್ಫೋಟಕವನ್ನು ಜೋಡಿಸಿದ್ದಾನೆ. ಅದು ಹೇಗೆ ಎಂದರೆ, ಮದುವೆಯ ಉಡುಗೊರೆಯಾಗಿ ನೀಡಲಾದ ವಿದ್ಯುತ್​ ಚಾಲಿತ ಐಟಂ ಅನ್ನು ಯಾರು ಒಮ್ಮೆ ಪ್ಲಗ್ ಇನ್ ಮಾಡುತ್ತಾರೋ, ಆ ಕ್ಷಣವೇ ಅದು ಸ್ಫೋಟಿಸುವಂತೆ ಆತ ತಯಾರಿಸಿರುವುದು ಗೊತ್ತಾಗಿದೆ. ಇದಕ್ಕಾಗಿ ಗೂಗಲ್​ ಸರ್ಚ್ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಕಳ್ಳಸಾಗಣೆ ಜಾಲದೊಂದಿಗೆ ಶಾಮಿಲು

ಆರೋಪಿ ಯುವಕನ ಕೊಲೆ ಸಂಚನ್ನು ವಿಫಲಗೊಳಿಸುವಲ್ಲಿ ಮಾತ್ರ ಯಶಸ್ವಿಯಾಗದ ಪೊಲೀಸರು, ಆತನಿಗೆ ಜೆಲಾಟಿನ್ ಸ್ಟಿಕ್‌ಗಳನ್ನು ಪೂರೈಸುವ ಸ್ಫೋಟಕ ಕಳ್ಳಸಾಗಣೆ ಜಾಲದೊಂದಿಗೆ ಸಂಪರ್ಕವಿರುವುದನ್ನೂ ಪತ್ತೆಹಚ್ಚಿದ್ದಾರೆ. ಈ ಪ್ರಕರಣದಲ್ಲಿ ಆರೋಪಿ ವಿನಯ್ ವರ್ಮಾ ಮತ್ತು ಇತರ ಆರು ಜನರನ್ನು ಖೈರಾಗಢ-ಚುಯಿಖಾದನ್-ಗಂಡೈ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ ಎಂದು ಹಿರಿಯ ವರಿಷ್ಠಾಧಿಕಾರಿ (ಎಸ್‌ಪಿ) ಲಕ್ಷ್ಯ ಶರ್ಮಾ ತಿಳಿಸಿದ್ದಾರೆ.

ಬೆಳಕಿಗೆ ಬಂದಿದ್ದೇಗೆ?

ನಾಲ್ಕು ದಿನಗಳ ಹಿಂದೆ ಗಂಡೈ ಪೊಲೀಸ್ ಠಾಣೆ ವ್ಯಾಪ್ತಿಯ ಮಾನ್ಪುರ್ ಗ್ರಾಮದ ಅಂಗಡಿಯೊಂದಕ್ಕೆ ಚೆನ್ನಾಗಿ ಡಿಸೈನ್ ಮಾಡಲಾದ ಹಾಗೂ ನಕಲಿ ಇಂಡಿಯಾ ಪೋಸ್ಟ್ ಸ್ಟಾಂಪ್​ನೊಂದಿಗೆ ಬಂದ ಪಾರ್ಸೆಲ್ ಈ ಪಿತೂರಿಯನ್ನು ಬಯಲಿಗೆಳೆದಿದೆ. ತನ್ನ ಹೆಸರಿನಲ್ಲಿ ಬಂದ ಪಾರ್ಸೆಲ್​ನ ಅನುಮಾನದಿಂದಲೇ ನೋಡಿದ ಗ್ರಾಮದ ನಿವಾಸಿ ಅಫ್ಸರ್ ಖಾನ್, ಇದೊಂದು ನಕಲಿಯದ್ದಾಗಿದೆ, ದಯವಿಟ್ಟು ಪರಿಶೀಲಿಸಿ ಎಂದು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ದೂರಿನನ್ವಯ ಕೇಸ್​ ಬೆನ್ನತ್ತಿದ ಖಾಕಿಗೆ, ಇದು ವಿನಯ್ ಸೇಡಿನ ಕಿಚ್ಚು ಎಂಬುದು ಸ್ಪಷ್ಟವಾಗಿದೆ.

ಬಾಂಬ್ ನಿಷ್ಕ್ರಿಯ ತಂಡವು, ಉಡುಗೊರೆಯನ್ನು ಪರಿಶೀಲಿಸಿದಾಗ, ಅದರಲ್ಲಿ ಹೊಸ ಸ್ಪೀಕರ್ ಕಂಡುಬಂದಿದೆ. ಇದರಲ್ಲಿ 2 ಕೆಜಿ ಐಇಡಿ ಅಡಗಿಸಿಟ್ಟಿರುವುದು ಪತ್ತೆಯಾಗಿದೆ. ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ವರ್ಮಾ, ಸ್ಪೀಕರ್​ವೊಂದನ್ನು ಖರೀದಿಸಿ ಆನ್‌ಲೈನ್ ಟ್ಯುಟೋರಿಯಲ್‌ಗಳನ್ನು ಬಳಸಿಕೊಂಡು ಐಇಡಿಯನ್ನು ಸೂಕ್ಷ್ಮವಾಗಿ ಜೋಡಿಸಿದ್ದಾನೆ. ಆತನ ಮೊಬೈಲ್ ಫೋನ್‌ನ ಗೂಗಲ್ ಸರ್ಚ್​ ಇತಿಹಾಸದಲ್ಲಿ ವಿನಯ್​ ತಡಕಾಡಿದ್ದ ವಿಷಯಗಳು ಪೊಲೀಸರಿಗೆ ಸಿಕ್ಕಿವೆ.

ಕೊಲೆಗೆ ಒನ್​-ವೇ ಲವ್​!

ಕಾಲೇಜು ದಿನಗಳಿಂದಲೂ ಖಾನ್​ರ ಪತ್ನಿಯನ್ನು ಪ್ರೀತಿಸುತ್ತಿದ್ದ ಆರೋಪಿ, ಆಕೆ ತನ್ನನ್ನು ಪ್ರೀತಿಸುತ್ತಿದ್ದಾಳೆಯೋ, ಇಲ್ಲವೋ ಎಂಬುದನ್ನು ಖಾತ್ರಿ ಪಡಿಸಿಕೊಳ್ಳದೆ ಒನ್​-ವೇ ಲವ್​ ಮಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಪ್ರೇಯಸಿಗೆ ಮದುವೆಯಾಗಿದ್ದು, ಖಾನ್ ಆಕೆಯ ಪತಿ ಎಂಬುದು ವಿನಯ್​ಗೆ ತಿಳಿಯಿತು. ಇದರಿಂದ ಕುಪಿತಗೊಂಡ ಆರೋಪಿ, ಆತನನ್ನು ಕೊಲೆಗೈಯಲು ಮಾಸ್ಟರ್​ಪ್ಲ್ಯಾನ್​ ಮಾಡಿದ್ದ ಎಂಬುದು ತನಿಖೆಯಲ್ಲಿ ಸ್ಪಷ್ಟವಾಗಿದೆ,(ಏಜೆನ್ಸೀಸ್).