ನ್ಯೂಸ್

ಮೃತಪಟ್ಟ ವ್ಯಕ್ತಿಯಿಂದ ಬಂತು ದೂರವಾಣಿ ಕರೆ! ಕಂಗಾಲಾದ ಕುಟುಂಬಸ್ಥರಿಗೆ ಕಾದಿತ್ತು ಭಾರೀ ಅಚ್ಚರಿ

ಮೋಹನ್​ ಶೆಟ್ಟಿ

ಆಂಧ್ರಪ್ರದೇಶ: ಸತ್ತು ಹೋಗಿದ್ದಾನೆ ಎಂದು ಹೇಳಲಾದ ವ್ಯಕ್ತಿಯೊಬ್ಬ ದಿಢೀರ್​ ಎಂದು ಕುಟುಂಬಸ್ಥರಿಗೆ ದೂರವಾಣಿ ಕರೆ ಮಾಡಿದ್ದು, ತಾನು ಜೀವಂತವಾಗಿದ್ದೇನೆ ಎಂದು ತಿಳಿಸಿದ್ದಾನೆ. ಈ ಸಂಗತಿ ಕೇಳಿ ದಿಗ್ಭ್ರಮೆಗೊಂಡ ಕುಟುಂಬದವರು ಏನು ಮಾಡಬೇಕು ಎಂದು ತೋಚದೆ, ಅಕ್ಕಪಕ್ಕದವರನ್ನು ಕೂಗಿ ಕರೆದ ವಿಚಿತ್ರ ಘಟನೆ ವಿಜಯವಾಡದ ವೀರಂಪಲೆಂ ಗ್ರಾಮದಲ್ಲಿ ವರದಿಯಾಗಿದೆ.

ಜೀವಂತವಾಗಿದ್ದೇನೆ ಎಂದ ವ್ಯಕ್ತಿಯನ್ನು ಕೇತಮಲ್ಲ ಪೂಸಯ್ಯ ಎಂದು ಗುರುತಿಸಲಾಗಿದ್ದು, ತನ್ನ ಕುಟುಂಬಸ್ಥರಿಗೆ ಕರೆ ಮಾಡಿ ತಾನು ಬದುಕಿದ್ದೇನೆ ಎಂದು ಹೇಳಿದ್ದಾನೆ. ಈ ಸಂಗತಿ ತಿಳಿದ ಮನೆಮಂದಿ ಇದು ಹೇಗೆ ನಿಜವಾಗುತ್ತದೆ? ಸತ್ತ ವ್ಯಕ್ತಿ ಹೇಗೆ ಬದುಕಿ ಬರಲು ಸಾಧ್ಯ? ಎಂದು ತಮ್ಮಲ್ಲೇ ಪ್ರಶ್ನೆ ಮಾಡಿಕೊಂಡಿದ್ದು, ನಾವೇ ಆತ ಸತ್ತಿರುವ ಬಗ್ಗೆ ಖಚಿತ ಪಡಿಸಿದ್ದೆವು ಎಂದು ಹೇಳಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಪೂಸಯ್ಯ ನಾಪತ್ತೆಯಾಗಿದ್ದರು. ಜಮೀನಿನೊಂದರಲ್ಲಿ ಸಂಪೂರ್ಣ ಸುಟ್ಟು ಕರಕಲಾದ ಶವವನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೃತದೇಹ ಕೃಷಿ ಕ್ಷೇತ್ರದ ವಿದ್ಯುತ್ ಪರಿವರ್ತಕ ಬಳಿ ಪತ್ತೆಯಾಗಿದ್ದು, ಸುಟ್ಟ ಶವದ ಪಕ್ಕದಲ್ಲಿ ಪೂಸಯ್ಯನ ಚಪ್ಪಲಿ ಇದ್ದದ್ದನ್ನು ಕಂಡ ಕುಟುಂಬಸ್ಥರು ಅದು ಅವರೇ ಇರಬಹುದು ಎಂದು ಶಂಕಿಸಿದ್ದರು.

ಮೃತದೇಹ ಅವರದ್ದೇ ಎಂದು ನಿರ್ಧರಿಸಿ ಪೊಲೀಸರಿಗೆ ಮಾಹಿತಿ ನೀಡಿದ ಕುಟುಂಬಸ್ಥರು ಬಳಿಕ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಮಾಡಲು ಮುಂದಾಗಿದ್ದರು. ರಂಗಂಪೇಟೆ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸದ್ದ ಬೆನ್ನಲ್ಲೇ ಕುಟುಂಬಸ್ಥರಿಗೆ ಕೇತಮಲ್ಲ ಪೂಸಯ್ಯ ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿ, ಅಸಲಿ ಸಂಗತಿಯನ್ನು ವಿವರಿಸಿದ್ದಾರೆ. ಈ ವಿಷಯ ಕೆಲವು ಸಮಯ ಗ್ರಾಮಸ್ಥರನ್ನು ಅಚ್ಚರಿಗೆ ದೂಡಿದ್ದು, ತದನಂತರ ಬಗೆಹರಿದಿದೆ,(ಏಜೆನ್ಸೀಸ್).