ನ್ಯೂಸ್

ಏನೂ ಮಾಡ್ದೇ 19 ಲಕ್ಷಕ್ಕೂ ಹೆಚ್ಚು ವೀವ್ಸ್​ ಪಡೆದ ಯೂಟ್ಯೂಬರ್: ಈ ವಿಡಿಯೋ ನೋಡ್ಬೇಡಿ, ಶಾಕ್​ ಆಗ್ಬೋದು!

ಜಕಾರ್ತ: ತಮ್ಮ ಪ್ರತಿಭೆ ಹಾಗೂ ಕೌಶಲಗಳ ಮೂಲಕ ಯೂಟ್ಯೂಬ್​ನಲ್ಲಿ ಪ್ರಖ್ಯಾತ ಪಡೆಯುವುದಲ್ಲದೇ, ಅನೇಕರು ಹಣ ಸಂಪಾದನೆಯನ್ನು ಮಾಡುತ್ತಿದ್ದಾರೆ. ಯೂಟ್ಯೂಬ್​ನಲ್ಲಿ ಒಂದು ವಿಡಿಯೋ ಅತಿ ಹೆಚ್ಚು ವೀಕ್ಷಣೆ ಪಡೆದಿದೆ ಅಂದರೆ ಅದರಲ್ಲಿ ಏನೋ ವಿಶೇಷತೆ ಇದೆ ಎಂದರ್ಥ. ಇನ್ನು ಕೆಲವರು ಹೆಚ್ಚಿನ ವೀವ್ಸ್​ ಪಡೆಯಲು ಇನ್ನಿಲ್ಲದ ಕಸರತ್ತು ಮಾಡುತ್ತಾರೆ. ಆದರೆ, ಇಲ್ಲೊಬ್ಬ ಯೂಟ್ಯೂಬರ್​ ಏನೂ ಮಾಡದೆ ಲಕ್ಷಾಂತರ ವೀವ್ಸ್​ ಗಿಟ್ಟಿಸಿ ಅಚ್ಚರಿ ಮೂಡಿಸಿದ್ದಾನೆ.

ಇಂಡೋನೆಷ್ಯಾದ ಮುಹಮ್ಮದ್​ ದಿದಿತ್​ ಎಂಬ ಯೂಟ್ಯೂಬರ್​ ವಿಡಿಯೋವೊಂದನ್ನು ಪೋಸ್ಟ್​ ಮಾಡಿದ್ದಾರೆ. ತಮ್ಮ ಮಾತೃ ಭಾಷೆಯಲ್ಲಿ ವಿಡಿಯೋ ಕುರಿತು ಬರೆದುಕೊಂಡಿದ್ದು ಅದರ ಸಾರ ಹೀಗಿದೆ... "ಏನೂ ಮಾಡದ ಎರಡು ಗಂಟೆ" ಎಂದು ಅಡಿಬರಹ ನೀಡಲಾಗಿದೆ.

ವಿಡಿಯೋದಲ್ಲಿರುವ ಯೂಟ್ಯೂಬರ್​ 2 ಗಂಟೆ 20 ನಿಮಿಷ ಹಾಗೂ 52 ಸೆಕೆಂಡ್​ ಏನೂ ಮಾಡದೇ ಸುಮ್ಮನೆ ನೆಲದ ಮೇಲೆ ಕುಳಿತು ಮಂಚಕ್ಕೆ ಒರಗಿದ್ದಾರೆ. ಕೇವಲ ಕ್ಯಾಮೆರಾವನ್ನು ಮಾತ್ರ ದಿಟ್ಟಿಸಿ ನೋಡಿದ್ದಾರೆ. ವಿಡಿಯೋ ನೋಡಿದವರು ಏನೂ ಇರಬಹುದು ಅಂದುಕೊಂಡು ತಾಳ್ಮೆಯಿಂದ ನೋಡಿದ್ರೆ ಹುಚ್ಚು ಹಿಡಿದರೂ ಹಿಡಿಯಬಹುದು ಏಕೆಂದರೆ ಅಲ್ಲಿ ಏನು ಇಲ್ಲ. ಯೂಟ್ಯೂಬರ್​ ಕೇವಲ ಕಣ್ಣು ಮಿಟುಕಿಸುವುದನ್ನು ಬಿಟ್ಟರೆ, ಬೇರೆ ಯಾವ ಚಟುವಟಿಕೆಯಾಗಲಿ, ಶಬ್ಧವಾಗಲಿ ವಿಡಿಯೋದಲ್ಲಿ ಇಲ್ಲ. ನೋಡಿದವರು ಅಕ್ಷರಶಃ ನಿರಾಸೆಯಾಗುವುದಂತೂ ಸತ್ಯ.

ಈ ಬಗ್ಗೆ ಡಿಸ್ಕ್ರಿಪ್ಸನ್​ ಬಾಕ್ಸ್​ನಲ್ಲಿ ಬರೆದುಕೊಂಡಿರುವ ಯೂಟ್ಯೂಬರ್, ನಾನು ಈ ವಿಡಿಯೋ ಏಕೆ ಮಾಡಿದೆ ಎಂಬುದನ್ನು ನಾನು ಶೇರ್​ ಮಾಡಿಕೊಳ್ಳುತ್ತೇನೆ. ಯುವಜನರಿಗೆ ಶಿಕ್ಷಣ ನೀಡುವ ವಿಷಯವನ್ನು ಪೋಸ್ಟ್ ಮಾಡಲು ಇಂಡೋನೇಷಿಯನ್​ ಸೊಸೈಟಿ ಕೇಳಿಕೊಂಡಿತು. ಇಷ್ಟವಿಲ್ಲದೆ, ಭಾರವಾದ ಹೃದಯದಿಂದ ನಾನಿದನ್ನು ಮಾಡಿದೆ. ನಾವೀಗ ವಿಡಿಯೋದ ಲಾಭದ ಬಗ್ಗೆ ಮಾತನಾಡಬೇಕಾದರೆ, ಅದೆಲ್ಲಾ ವೀಕ್ಷಕರ ಮೇಲೆ ಅವಲಂಬಿತವಾಗಿರುತ್ತದೆ. ಏನೇ ಆಗಲಿ ಈ ವಿಡಿಯೋದಿಂದ ನೀವೆಲ್ಲರೂ ಮನರಂಜನೆ ಹಾಗೂ ಲಾಭವನ್ನು ಪಡೆಯುತ್ತೀರಾ ಎಂದು ನಾನು ಭಾವಿಸಿದ್ದೇನೆಂದು ಬರೆದುಕೊಂಡಿದ್ದಾರೆ.

ಜುಲೈ 10ರಂದು ಅಪ್​ಲೋಡ್​ ಆದ ವಿಡಿಯೋ ಇದೀಗ ವೈರಲ್​ ಆಗಿದ್ದು, ಯೂಟ್ಯೂಬ್​ನಲ್ಲಿ 19 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ. ಈ ವ್ಯಕ್ತಿ ಏನು ಮಾಡದೇ ಎರಡು ಗಂಟೆ ಕಳೆದಿದ್ದಾರೆ ಎಂದು ಕಾಮೆಂಟ್​ ಮಾಡಿದರೆ, ಮತ್ತೊರ್ವ ಇವರು 362 ಬಾರಿ ಕಣ್ಣು ಮಿಟುಕಿಸಿದ್ದಾರೆ ಎಂದಿದ್ದಾರೆ. ಏನೇ ಆದರೂ ಅಷ್ಟೋಂದು ವೀವ್ಸ್​ ಬಂದಿರುವುದು ಅಚ್ಚರಿಯೇ ಸರಿ. (ಏಜೆನ್ಸೀಸ್​)