ನ್ಯೂಸ್

ಪಾರ್ಕಿಂಗ್​ ಸಿಬ್ಬಂದಿಯಂತೆ ಪೋಸ್​ ನೀಡಿ ಐಷಾರಾಮಿ ಕಾರುಗಳನ್ನು ಕದ್ದ ಖದೀಮ

ಹೈದರಾಬಾದ್​: ವ್ಯಾಲೆಟ್​ ಪಾರ್ಕಿಂಗ್​ ಸಿಬ್ಬಂದಿಯಂತೆ ಪೋಸ್​ ನೀಡಿ ಖದೀಮನೊಬ್ಬ 1 ಕೋಟಿ ರೂಪಾಯಿ ಮೌಲ್ಯದ ಎರಡು BMW ಕಾರುಗಳನ್ನು ಕದ್ದು ಪರಾರಿಯಾಗಿರುವ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದಿನ ಬೌಲ್ಡರ್​ ಹಿಲ್ಸ್​ನಲ್ಲಿ ನಡೆದಿದೆ.

ಖ್ಯಾತ ಗಾಯಕ ಬಾದ್​ ಷಾ ಅವರ ಲೈವ್​ ಕಾನ್​ಸರ್ಟ್​ನಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನ ಹೆಸರು ಅರುಣ್​ ರೆಡ್ಡಿ ಎಂದು ತಿಳಿದು ಬಂದಿದ್ದು, ಈತ ವೆಬ್​ ಡಿಸೈನರ್​ ಆಗಿ ಕೆಲಸ ಮಾಡುತ್ತಿದ್ಧಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅತಿಯಾದ ಒಲವು

ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಡಿಸಿಪಿ ಶಿಲ್ಪವಲ್ಲಿ BMW ಕಾರುಗಳ ಮೇಲಿನ ಅತಿಯಾದ ಒಲವಿನಿಂದ ಈ ರೀತಿ ಮಾಡಿದ್ದಾಗಿ ಆರೋಪಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಜೂನ್​ 24ರಂದು ಆರೋಪಿಯೂ ಬಾದ್​ ಷಾ ಅವರ ಲೈವ್​ ಕಾನ್​ಸರ್ಟ್​ನಲ್ಲಿ ವ್ಯಾಲೆಟ್​ ಪಾರ್ಕಿಂಗ್​ ಸಿಬ್ಬಂದಿಯಂತೆ ಪೋಸ್​ ನೀಡಿ BMW z4 ಹಾಗೂ X5 ಕಾರುಗಳನ್ನು ಕದ್ದು ಪರಾರಿಯಾಗಿದ್ದ.

ಕಾರುಗಳನ್ನು ಕದ್ದ ಬಳಿಕ ಅದನ್ನು ಐಷಾರಾಮಿ ಹೋಟೆಲ್​ ಒಂದರಲ್ಲಿ ಪಾರ್ಕಿಂಗ್​ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಮಾಲೀಕರು ನೀಡಿದ ದೂರನ್ನು ಆಧರಿಸಿ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಶನಿವಾರ ಬೆಳಗ್ಗೆ ಕಾರನ್ನು ಪಾರ್ಕಿಂಗ್​ ಲಾಟ್​ನಿಂದ ತೆಗೆದುಕೊಂಡು ಹೋಗಲು ಬಂದಾಗ ಆರೋಪಿಯನ್ನು ಬಂಧಿಸಿದ್ದಾಗಿ ಡಿಸಿಪಿ ಶಿಲ್ಪವಲ್ಲಿ ತಿಳಿಸಿದ್ದಾರೆ.

ಬಂಧಿತ ಆರೋಪಿಯೂ ಕಳೆದ ವರ್ಷವೂ ಕೂಡ ಪ್ರತಿಷ್ಠಿತ ಪಬ್​ ಒಂದರಿಂದ ಐಷಾರಾಮಿ ಕಾರನ್ನು ಕದ್ದು ಅದರ ನಂಬರ್​ ಪ್ಲೇಟ್​ ಬದಲಾಯಿಸಿ ತಿರುಗುತ್ತಿದ್ದ. ಆ ಕಾರನ್ನು ಸಹ ವಶಕ್ಕೆ ಪಡೆಯಲಾಗಿದ್ದು, ಸಂಬಂಧಪಟ್ಟವರನ್ನು ಹುಡುಕಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.