ನ್ಯೂಸ್

ಸಿಗರೇಟ್​ ಸೇದುತ್ತ ಶಿವಲಿಂಗದ ಮೇಲೆ ಕಾಲಿಟ್ಟು Reels ಮಾಡಿದ ಮುಸ್ಲಿಂ ವ್ಯಕ್ತಿ; ವಿಡಿಯೋ ವೈರಲ್​

ಭೋಪಾಲ್​: ಇತ್ತೀಚಿನ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ (Reels) ಹಾವಳಿ ಮಿತಿಮೀರಿದ್ದು, ಜನರು ವೈರಲ್​ ಆಗುವ ಭರದಲ್ಲಿ ಹುಚ್ಚು ಸಾಹಸಕ್ಕೆ ಕೈಹಾಕಿ ಇನ್ನಿಲ್ಲದ ಪೇಚಿಗೆ ಸಿಲುಕುತ್ತಾರೆ. ಇದೀಗ ವ್ಯಕ್ತಿಯೋರ್ವ ಶಿವಲಿಂಗದ ಮೇಲೆ ಕಾಲಿಟ್ಟು ರೀಲ್ಸ್ ಮಾಡಿ ಪೊಲೀಸರ ಅತಿಥಿಯಾಗಿರುವ ಘಟನೆ ಮಧ್ಯಪ್ರದೇಶದ ರತ್ಲಾಮ್​ ಜಿಲ್ಲೆಯಲ್ಲಿ ನಡೆದಿದೆ.

ಬಂಧಿತನನ್ನು ಇಮ್ರಾನ್​ ಸುಕ್ಕಾ ಎಂದು ಗುರುತಿಸಲಾಗಿದ್ದು, ಈತ ಸಿಗರೇಟ್​ ಸೇದುತ್ತ ಶಿವಲಿಂಗದ ಮೇಲೆ ಕಾಲಿಟ್ಟು ಪೋಸ್​ ನೀಡಿರುವ ರೀಲ್​ (Reels) ವೈರಲ್​ ಆಗಿದ್ದು, ಪೊಲೀಸರು ಆತನ ವಿರುದ್ಧ ಕ್ರಮ ಜರುಗಿಸಿದ್ದಾರೆ.

ಘಟನೆ ಕುರಿತಾಗಿ ಮಾತನಾಡಿರುವ ರತ್ಲಾಮ್​ ವಿಭಾಗದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಬಂಧಿತ ಇಮ್ರಾನ್​ ಸುಕ್ಕಾ ವಿರುದ್ಧ ಈಗಾಗಲೇ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಕೆಲ ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ರೀಲ್ಸ್​ಗಾಗಿ (Reels) ಈ ರೀತಿ ಮಾಡಿದ್ದಾಗಿ ಆತ ತಪ್ಪೊಪ್ಪಿಕೊಂಡಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ. ವಿಹಿಂಪ ಹಾಗೂ ಭಜರಂಗದಳದ ಸದಸ್ಯರು ಈ ಸಂಬಂಧ ದೂರು ದಾಖಲಿಸಿದ್ದು, ಆರೋಪಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನೂ ಆರೋಪಿಯನ್ನು ಪೊಲೀಸರು ವೈದ್ಯಕೀಯ ತಪಾಸಣೆ ನಡೆಸಲು ಆಸ್ಪತ್ರೆಗೆ ಕೊಂಡೊಯ್ಯುವಾಗ ಆತನ ಮೇಲೆ ಗುಂಪೊಂದು ದಾಳಿ ಮಾಡಿದ್ದು, ಪೊಲೀಸರು ಆತನನ್ನು ರಕ್ಷಿಸಿದ್ದಾರೆ. ಹಲವರು ಈತನ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದು, ಪೊಲೀಸರು ಈತನ ವಿರುದ್ಧ ದಾಖಲಾಗಿದ್ದ ಹಳೇ ಪ್ರಕರಣಗಳನ್ನು ಪರಿಶೀಲಿಸುತ್ತಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.