ಚಂಡೀಗಢ : ಬಾಲಕಿಯೊಬ್ಬಳಿಗೆ ಕಿರುಕುಳ ಕೊಡುತ್ತಿದ್ದ ಯುವಕನಿಗೆ ಬುದ್ಧಿ ಹೇಳಲು ಹೋದವನನ್ನು ಇರಿದು ಕೊಂದಿರುವ ಘಟನೆ ಹರಿಯಾಣದ ರೋಹ್ಟಕ್ ನಗರದಿಂದ ವರದಿಯಾಗಿದೆ. ಬಾಕ್ಸರ್, ಮಾಡೆಲ್ ಮತ್ತು ನಟನಾಗಿದ್ದ 24 ವರ್ಷದ ಕಾಮೇಶ್ ಎಂಬುವ ಮೃತ ದುರ್ದೈವಿ.
ರೋಹ್ಟಕ್ನ ತೇಜ್ ಕಾಲನಿಯಲ್ಲಿ ವಾಸಿಸುತ್ತಿದ್ದ ಕಾಮೇಶ್, ಅದೇ ಪ್ರದೇಶದ ನಿವಾಸಿಯಾಗಿದ್ದ 12 ವರ್ಷದ ಬಾಲಕಿಯೊಬ್ಬಳನ್ನು ಖದೀಮನೊಬ್ಬ ಚುಡಾಯಿಸುತ್ತಾ ಕಿರುಕುಳ ನೀಡುವುದನ್ನು ನೋಡಿದ್ದ. ಜೂನ್ 7 ರ ರಾತ್ರಿ ತನ್ನ ಸಂಬಂಧಿಕರ ಮನೆಗೆ ತೆರಳುತ್ತಿದ್ದಾಗ ಆ ವ್ಯಕ್ತಿಯನ್ನು ಕಂಡಾಗ, ದುರ್ವರ್ತನೆಯನ್ನು ನಿಲ್ಲಿಸಬೇಕೆಂದು ಎಚ್ಚರಿಕೆ ನೀಡಿದ್ದಾನೆ. ದಿಢೀರನೇ ಚಾಕು ಎಳೆದ ಆತ, ಕಾಮೇಶ್ನನ್ನು ಹಲವು ಬಾರಿ ಇರಿದಿದ್ದಾನೆ.
ಗಂಭೀರವಾಗಿ ಗಾಯಗೊಂಡ ಕಾಮೇಶ್ನನ್ನು ನಗರದ ಪಿಜಿಐಎಂಎಸ್ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಪ್ಪಿದ ಎಂದು ಡಿಎಸ್ಪಿ ಗೋರಖಪಾಲ್ ಹೇಳಿದ್ದಾರೆ. ರೋಹ್ಟಕ್ ಪೊಲೀಸರು ಕೇಸು ದಾಖಲಿಸಿದ್ದು, ಆರೋಪಿಯ ಹುಡುಕಾಟದಲ್ಲಿದ್ದಾರೆ. (ಏಜೆನ್ಸೀಸ್)