ನ್ಯೂಸ್

ಅಜ್ಜಿ, ಸಹೋದರ... ತನ್ನದೇ ಕುಟುಂಬದ 5 ಸದಸ್ಯರ ಬರ್ಬರ ಹತ್ಯೆ! ಕೊಲೆಗೆ ಕಾರಣ ಗೊತ್ತಿಲ್ಲ ಎಂದ ಯುವಕ | Murder Case

Murder Case: ತನ್ನ ಕುಟುಂಬದ ಸದಸ್ಯರನ್ನೇ ಭೀಕರವಾಗಿ ಹತ್ಯೆಗೈದಿರುವ ಆರೋಪಿ ಯುವಕ, ಅಜ್ಜಿ, ಕಿರಿಯ ಸಹೋದರ ಮತ್ತು ಕುಟುಂಬಸ್ಥರನ್ನು ಕ್ರೂರವಾಗಿ ಕೊಲೆಗೈದ ಘಟನೆ ಕೇರಳದ ತಿರುವನಂತಪುರಂನಲ್ಲಿ ಸಂಭವಿಸಿದೆ.

ಅಪ್ಡೇಟ್​ ಆದ ನಂತರದ ಸುದ್ದಿ

ಕೊಲೆಗೈದ ಬಳಿಕ ವಿಷ ಸೇವಿಸಿರುವುದಾಗಿ ಪೊಲೀಸರ ಬಳಿ ಹೇಳಿಕೊಂಡ ಯುವಕನನ್ನು ಪೊಲೀಸರು, ಹತ್ತಿರದ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಆರೋಪಿಯು ತನ್ನ ಅಜ್ಜಿ, ಕಿರಿಯ ಸಹೋದರ ಮತ್ತು ಇತರ ಸಂಬಂಧಿಕರು ಸೇರಿದಂತೆ ಕುಟುಂಬದ ಐದು ಸದಸ್ಯರನ್ನು ಹತ್ಯೆಗೈದಿದ್ದಾನೆ ಎಂದು ವರದಿಯಾಗಿದೆ. ನಾಲ್ವರು ಕುಟುಂಬಸ್ಥರು ಮತ್ತು ಓರ್ವ ಯುವತಿ ಸಾವಿಗೀಡಾದವರು ಎಂದು ವರದಿ ಉಲ್ಲೇಖಿಸಿದೆ. ಮೃತರನ್ನು ಅಜ್ಜಿ ಸಲ್ಮಾಬೀಬಿ, ಸಹೋದರ ಅಫ್ಸಾನ್ (13), ಯುವಕನ ತಂದೆಯ ಸಹೋದರ ಲತೀಫ್, ಲತೀಫ್ ಪತ್ನಿ ಶಾಹಿದಾ ಮತ್ತು ಓರ್ವ ಯುವತಿ ಎಂದು ಆರಂಭಿಕ ತನಿಖೆಯಲ್ಲಿ ಗುರುತಿಸಲಾಗಿದೆ. ಈ ಪೈಕಿ ಯುವತಿ ಫರ್ಸಾನಾಳನ್ನು ಆರೋಪಿ ಅಫಾನ್​ ಪ್ರೇಯಸಿ ಎಂದು ಪೊಲೀಸರು ಶಂಕಿಸಿದ್ದಾರೆ.

ಇಂದು (ಫೆ.24) ಮುಂಜಾನೆ, ಪೊಲೀಸರಿಗೆ ಕರೆ ಮಾಡಿದ ಅಫಾನ್​, ತನ್ನ ಕುಟುಂಬದ ಐದು ಮಂದಿಯನ್ನು ಭೀಕರವಾಗಿ ಹಲ್ಲೆಗೈದು ನಂತರ ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ನನ್ನಿಂದ ತಪ್ಪಾಗಿದೆ ಎಂದೂ ತಪ್ಪೊಪ್ಪಿಕೊಂಡಿದ್ದಾನೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮನೆಯ ಕೋಣೆಗಳಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ಶವಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಈ ವೇಳೆ ತಾನು ವಿಷ ಸೇವಿಸಿರುವುದಾಗಿ ಆತ ತಿಳಿಸಿದ್ದಾನೆ. ಕೂಡಲೇ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ ಖಾಕಿ ಪಡೆ, ಆತನನ್ನು ತನಿಖೆಗೆ ಒಳಪಡಿಸಿದೆ.

ಪೊಲೀಸರ ಪ್ರಕಾರ, ಆರೋಪಿ ಮಾದಕ ವ್ಯಸನಿಯಾಗಿದ್ದು, ಇತ್ತೀಚೆಗಷ್ಟೇ ಕೇರಳದಲ್ಲಿರುವ ತನ್ನ ನಿವಾಸಕ್ಕೆ ಬಂದಿದ್ದ. ಊರಿಗೆ ಬರುವ ಮೊದಲು ಆತ ವಿದೇಶದಲ್ಲಿ ನೆಲೆಸಿದ್ದ. ಯುವಕನ ತಂದೆಯೂ ದೀರ್ಘಕಾಲದಿಂದ ವಿದೇಶದಲ್ಲಿ ವಾಸಿಸುತ್ತಿದ್ದಾರೆ. ಮಗನ ದಾಳಿಗೆ ಸಿಲುಕಿ ತೀವ್ರ ಗಾಯಗೊಂಡಿದ್ದ ಅಫಾನ್‌ನ ತಾಯಿ, ಅದೃಷ್ಟವಶಾತ್ ಸಾವಿನಿಂದ ಪಾರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗಿದೆ. ವೆಂಬಯಂನಲ್ಲಿರುವ ಯುವಕನ ಮನೆಯಲ್ಲಿ ಕೊಲೆಗಳು ಸಂಭವಿಸಿದ್ದು, ಭೀಕರವಾಗಿ ಹತ್ಯೆಗೈದಿರುವುದು ತಿಳಿದುಬಂದಿದೆ.

ಈ ಭೀಕರ ಕೊಲೆ ಬೆಳಗಿನ ಜಾವ 4 ಗಂಟೆ ಸುಮಾರಿಗೆ ನಡೆದಿದೆ ಎಂದು ನಂಬಲಾಗಿದೆ. ಅಸಲಿಗೆ ಅಫಾನ್​ ತನ್ನವರನ್ನೇ ಹತ್ಯೆಗೈಯುವ ಹಿಂದಿರುವ ಉದ್ದೇಶವೇನು? ಎಂಬುದು ಇಲ್ಲಿಯವರೆಗೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದರೆ, ತಾನೇ ಕೊಲೆ ಮಾಡಿರುವುದಾಗಿ ಆತ ವೆಂಜರಮೂಡು ಪೊಲೀಸ್ ಠಾಣೆಗೆ ಕರೆ ಮಾಡಿ, ಶರಣಾಗಿದ್ದಾನೆ. ಆರು ಜನರ ಕೊಲೆಗೆ ಕಾರಣವೇನು ಎಂಬುದನ್ನು ನಿಖರವಾಗಿ ತಿಳಿಯಲು ಖಾಕಿ ಪಡೆ ಮುಂದಾಗಿದ್ದು, ಚುರುಕು ತನಿಖೆ ಕೈಗೊಂಡಿದೆ,(ಏಜೆನ್ಸೀಸ್).