ನವದೆಹಲಿ: ತಮ್ಮ ನೆಚ್ಚಿನ ಸಾಕು ಪ್ರಾಣಿಗಳ ಜತೆ ಮೋಜು ಮಾಡುವುದು ಮಾಮೂಲು. ಅಂಥದ್ದೇ ಒಂದು ಮೋಜು ಮಾಡಿದ ವಿಡಿಯೋ ಇದೀಗ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ನಕ್ಕೂ ನಕ್ಕೂ ಸುಸ್ತಾಗಿದ್ದಾರೆ.
ಅಮನ್ ಎನ್ನುವವರು ತಮ್ಮ ಮುದ್ದಿನ ಬೆಕ್ಕಿಗೆ ಐಸ್ಕ್ರೀಂ ತಿನ್ನಿಸಿರುವ ದೃಶ್ಯವಿದು. 11 ಸೆಕೆಂಡುಗಳ ಈ ವಿಡಿಯೋವನ್ನು ಅವರು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಇದನ್ನು ಅನೇಕ ಮಂದಿ ರೀಟ್ವೀಟ್ ಮಾಡಿದ್ದಾರೆ.
ಐಸ್ಕ್ರೀಂ ತಿನ್ನುವಾಗ ಎಂಥವರಿಗೆ ಆದರೂ ಮೈಯೆಲ್ಲಾ ಝಂ ಎನ್ನುವುದುಂಟು. ಅದರಲ್ಲಿಯೂ ಮೊದಲ ಬಾರಿಗೆ ಐಸ್ಕ್ರೀಂ ಎಂದರೆ ಏನು ಎಂಬುದರ ಅರಿವೇ ಇಲ್ಲದ ವೇಳೆ ಅದನ್ನು ಬಾಯಿಗೆ ಇಟ್ಟರೆ ಅದರ ವಿಚಾರವೇ ಬೇರೆ. ಅಂಥದ್ದರಲ್ಲಿ ಬೆಕ್ಕಿಗೆ ಐಸ್ಕ್ರೀಂ ನೀಡಿದರೆ ಹೇಗಿರುತ್ತೆ?
ಇಂಥದ್ದೇ ಯೋಚನೆ ಅಮನ್ಗೆ ಬಂದಿತಂತೆ. ಅದನ್ನು ತಮ್ಮ ಬೆಕ್ಕಿನ ಮೇಲೆ ಪ್ರಯೋಗ ಮಾಡುವ ಮನಸ್ಸಾಗಿ, ಚಿಕ್ಕ ಚಮಚದಲ್ಲಿ ಬೆಕ್ಕಿನ ಬಾಯಿಗೆ ಐಸ್ಕ್ರೀಂ ಇಟ್ಟಿದ್ದಾರೆ. ಮೊದಮೊದಲು ಅದನ್ನು ಬಾಯಿಗೆ ಚೆನ್ನಾಗಿ ಹಾಕಿಕೊಂಡ ಬೆಕ್ಕಿಗೆ ಮೈಯೆಲ್ಲಾ ಝುಂ ಎನಿಸಿ, ಬಿದ್ದುಹೋಯಿತು.
ಈ ವಿಡಿಯೋ ಒಮ್ಮೆ ನೋಡಿದಾಗ ನೋಡುಗರಿಗೆ ಖುಷಿ ಕೊಟ್ಟರೂ ಬೆಕ್ಕಿನ ಸ್ಥಿತಿ ಕಂಡು ಕೆಲವರು ಅದರ ವಿರುದ್ಧ ಕೂಡ ಕಮೆಂಟ್ ಮಾಡಿದ್ದಾರೆ. ಇದೊಂದು ಕ್ರೂರ ಕೃತ್ಯವಾಗಿದೆ ಎಂದು ಕೆಲವರು ಟೀಕಿಸಿದ್ದರೆ, ಐಸ್ಕ್ರೀಂ ತಿಂದು ಬೆಕ್ಕಿನ ಸ್ಥಿತಿ ಹೇಗಾಗಿರಬೇಡ? ಅದರ ಆರೋಗ್ಯ ಹದಗೆಟ್ಟರೆ ಅದಕ್ಕೆ ಯಾರು ಹೊಣೆ ಎಂಬುದಾಗಿಯೂ ಬೈದು ಬರೆದಿದ್ದಾರೆ.
ಆದರೆ 11 ಸೆಕೆಂಡುಗಳ ಈ ವಿಡಿಯೋ ಮಾತ್ರ ಕ್ಷಣ ಕ್ಷಣಕ್ಕೂ ಶೇರ್ ಆಗುತ್ತಲೇ ಇದೆ. (ಏಜೆನ್ಸೀಸ್)