ವಿಚಿತ್ರ, ವಿಲಕ್ಷಣ ಘಟನೆಯೊಂದು ಮತ್ತೊಮ್ಮೆ ಬೆಳಕಿಗೆ ಬಂದಿದ್ದು, ಅಳಿಯನನ್ನೇ ಕಿಡ್ನಾಪ್ ಅತ್ತೆ-ಮಾವ ಮಾಡಿ, ಆತನಿಗೆ ಚಿತ್ರಹಿಂಸೆ ಕೊಟ್ಟ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ವರದಿಯಾಗಿದೆ. ಯುವಕನನ್ನು ಅತ್ತೆ ಮನೆಯವರೇ ಅಪಹರಿಸಿ ಅಮಾನುಷವಾಗಿ ಚಿತ್ರಹಿಂಸೆ ನೀಡಿದ್ದಲ್ಲದೇ, ಆತನಿಗೆ ಮೂತ್ರ ಕುಡಿಯುವಂತೆ ಬಲವಂತ ಪಡಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ದಂಪತಿ, ಆತನನ್ನು ಅಮಾನುಷವಾಗಿ ಥಳಿಸಿ, ಚಪ್ಪಲಿ ಹಾರ ಹಾಕಿ ಎಳೆದೊಯ್ದ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಯುವಕನ ಅತ್ತೆ-ಮಾವ ಮತ್ತು ಅವರ ಕುಟುಂಬದ ಕೆಲವು ಸದಸ್ಯರು ಸೇರಿ ಆತನನ್ನು ಹಗ್ಗದಿಂದ ಕಟ್ಟಿಹಾಕಿ, ಕುತ್ತಿಗೆಗೆ ಚಪ್ಪಲಿ ಹಾರವನ್ನು ಹಾಕಿ ಹೊತ್ತೊಯ್ಯುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಘಟನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದೇ ತಡ ಹಲ್ಲೆಗೊಳಗಾದ ಯುವಕನ ತಂದೆ ಪೊಲೀಸರಿಗೆ ದೂರು ನೀಡಿ, ಸೊಸೆಯ ಕುಟುಂಬಸ್ಥರ ಮೇಲೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಅಷ್ಟಕ್ಕೂ ಇದಕ್ಕೆಲ್ಲಾ ಕಾರಣವೇನು? ಹೀಗಿದೆ ಘಟನೆಯ ವರದಿ.
ಘಟನೆಯ ವಿವರ: ಮಹಿಳೆಯೊಂದಿಗಿನ ಅಕ್ರಮ ಸಂಬಂಧದಿಂದಾಗಿ ಯುವಕ ಈ ಯಾತನೆ ಅನುಭವಿಸಬೇಕಾಯಿತು ಎಂಬ ವರದಿಗಳಿವೆ. ಆತ ತನ್ನ ಊರಿನ ಮತ್ತೊಬ್ಬ ಹುಡುಗಿಯ ಜತೆ ಅಕ್ರಮ ಪ್ರೇಮ ಸಂಬಂಧದಲ್ಲಿ ತೊಡಗಿದ್ದಕ್ಕಾಗಿ ಹೆಂಡತಿಯ ಮನೆಯವರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಲ್ಲೆಗೊಳಗಾದ ಯುವಕನನ್ನು 21 ವರ್ಷದ ಮೊರಾದಾಬಾದ್‌ನ ಅಗ್ವಾನ್‌ಪುರ ನಿವಾಸಿ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ವಿಶ್ವ ನಂ. 1 ಪಟ್ಟದಲ್ಲಿ 10 ವಾರ ಪೂರೈಸಿದ ಚಿರಾಗ್-ಸಾತ್ವಿಕ್; ಬ್ಯಾಡ್ಮಿಂಟನ್ನಲ್ಲಿ ಹೊಸ ಇತಿಹಾಸ ಬರೆದ ಭಾರತೀಯ ಜೋಡಿ
ಅನೈತಿಕ ಸಂಬಂಧವೇ ಕಾರಣ: ಯುವಕ ತಾನು ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯನ್ನೇ ಮದುವೆಯಾಗಲು ಬಯಸಿದ್ದ ಎಂದು ವರದಿಯಾಗಿದೆ. ಆದರೆ, ಆಕೆ ಆತನ ಸಂಬಂಧಿಕರಾಗಿದ್ದರಿಂದ ಈ ಮದುವೆ ಸಾಧ್ಯವಾಗಿರಲಿಲ್ಲ. ಮಾರ್ಚ್ 5ರಂದು ಯುವಕ ಬೇರೆ ಹುಡುಗಿಯನ್ನು ಮದುವೆಯಾಗಿದ್ದ. ವಿವಾಹ ನಡೆದ ಕೆಲವು ದಿನಗಳ ಬಳಿಕ ಪತ್ನಿ ಆತನ ಮೊಬೈಲ್ ಫೋನ್ ಚೆಕ್ ಮಾಡಿದ್ದಾಳೆ. ಆಗ ಮದುವೆಗೂ ಮುನ್ನ ಪತಿ ಮಹಿಳೆಯೊಂದಿಗಿದ್ದ ಖಾಸಗಿ ಫೋಟೋಗಳು ಮತ್ತು ವಿಡಿಯೋಗಳು ಪತ್ತೆಯಾಗಿವೆ.
ಇದನ್ನು ನೋಡಿ ಶಾಕ್ ಆದ ಮಹಿಳೆ ತನ್ನ ಗಂಡನ ಪ್ರೇಮ ಪುರಾಣದ ಬಗ್ಗೆ ತಂದೆಗೆ ದೂರು ನೀಡಿದ್ದಾಳೆ. ತಕ್ಷಣವೇ ಯುವತಿಯ ತಂದೆ, ತಾಯಿ ಮತ್ತು ಇತರ ಸಂಬಂಧಿಕರು ಮಾರ್ಚ್ 30ರಂದು ಮಧ್ಯಾಹ್ನ 12 ಗಂಟೆಗೆ ಅಗ್ವಾನ್‌ಪುರ ರೈಲು ನಿಲ್ದಾಣದ ಬಳಿ ಯುವಕನನ್ನು ಅಪಹರಿಸಿ ತನ್ನ ಮಾಜಿ ಪ್ರೇಯಸಿ ಮನೆಗೆ ಕರೆದೊಯ್ದು, ಆಕೆಯ ಮುಂದೆಯೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ತದನಂತರ ಅದೇ ಹುಡುಗಿಯ ಕೈಯಿಂದ ಮೂತ್ರ ಮತ್ತು ಶೌಚಾಲಯದ ನೀರನ್ನು ಕುಡಿಯುವಂತೆ ಒತ್ತಾಯಿಸಿದ್ದಾರೆ.
ದೂರು ದಾಖಲು: ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಘಟನೆಯ ವೈರಲ್ ವಿಡಿಯೋವನ್ನು ಪರಿಶೀಲಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ಬಂಧನದ ವರದಿಗಳಿಲ್ಲ,(ಏಜೆನ್ಸೀಸ್).