ನ್ಯೂಸ್

ಪತ್ನಿಯನ್ನು ಹತ್ಯೆ ಮಾಡಿ ಮೂರನೇ ಮದುವೆಯಾದ ಭೂಪ; ಪೊಲೀಸರಿಗೆ ಆರೋಪಿ ಸಿಕ್ಕಿಬಿದ್ದಿದ್ದೆ ರೋಚಕ

ಬೆಂಗಳೂರು: ಶೀಲ ಶಂಕಿಸಿ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿ ಪೊಲೀಸರ ಅತಿಥಿಯಾಗಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಸರ್ಜಾಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ರುಮೇಶ್ ಖಾತುನ್‍ (22) ಎಂದು ಗುರುತಿಸಲಾಗಿದ್ದು, ಬಂಧಿತನನ್ನು ಬಿಹಾರ ಮೂಲದ ಮಹಮದ್ ನಸೀಮ್ (39) ಎಂದು ಗುರತಿಸಲಾಗಿದೆ. ವೃತ್ತಿಯಲ್ಲಿ ಪೇಂಟರ್​ ಆಗಿರುವ ನಸೀಮ್​ ಪತ್ನಿಯನ್ನು ಹತ್ಯೆ ಮಾಡಿದ ಬಳಿಕ ಕೈ ಕಾಲು ಕಟ್ಟಿ, ಚರಂಡಿಗೆ ಎಸೆದು ಬಿಹಾರದ ಮುಜಾಫರ್​ಪುರದಲ್ಲಿ ತಲೆಮಾರಿಸಿಕೊಂಡಿದ್ದ.

ಮೋರಿಯಿಂದ ಕೊಳೆತ ವಾಸನೆ ಬರುತ್ತಿದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ತೆರಳಿ ಮೃತದೇಹವನ್ನು ಹೊರತೆಗೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಜಾಡನ್ನು ಹಿಡಿದು ಹೊರಟಿದ್ದು, ಆತ ಬಿಹಾರದಲ್ಲಿ ತನ್ನ ಆರು ಮಕ್ಕಳೊಂದಿಗೆ ತಲೆಮಾರಿಸಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಆರೋಪಿಯ ಜಾಡು ಹಿಡಿದು ತೆರಳಿದ ಪೊಲೀಸರು ಮೂರನೇ ಮದುವೆ ಮಾಡಿಕೊಂಡು ಸಂಭ್ರಮದಲ್ಲಿದ್ದ ನಸೀಮ್​ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಮಾತನಾಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಆರೋಪಿ ತನ್ನ ಹೆಂಡತಿಯ ಶೀಲ ಶಂಕಿಸಿ ಪದೇ ಪದೇ ಹಲ್ಲೆ ಮಾಡುತ್ತಿದ್ದ. ಕಳೆದ ತಿಂಗಳು ಇದೇ ವಿಚಾರಕ್ಕೆ ದಂಪತಿಗಳ ನಡುವೆ ಜಗಳವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಉಸಿರುಗಟ್ಟಿಸಿ ಪತ್ನಿಯನ್ನು ಕೊಲೆ ಮಾಡಿದ್ದ ಬಳಿಕ ತನ್ನ ಆರು ಮಕ್ಕಳೊಂದಿಗೆ ಬಿಹಾರಕ್ಕೆ ತೆರಳಿ ಅಲ್ಲಿ ತಲೆಮಾರಿಸಿಕೊಂಡಿದ್ದ. ಬಳಿಕ ಮೂರನೇ ಮದುವೆಯಾಗಿದ್ದ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.