ನ್ಯೂಸ್

ಸಂಬಂಧಿಯನ್ನೇ ಸುತ್ತಿಗೆಯಿಂದ ಹೊಡೆದು ಕೊಂದು ಪೀಸ್​ಪೀಸ್ ಮಾಡಿದ; ಒಂದೊಂದು ತುಂಡನ್ನು ಒಂದೊಂದು ಕಡೆ ಎಸೆದ!

ರಾಜಸ್ಥಾನ: ಶ್ರದ್ಧಾ ವಾಕರ್ ಕೊಲೆಯನ್ನು ನೆನಪಿಸುವಂಥ ಮತ್ತೊಂದು ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲೊಬ್ಬ ತನ್ನ ಸಂಬಂಧಿಯನ್ನೇ ಸುತ್ತಿಗೆಯಿಂದ ಹೊಡೆದು ಕೊಂದು, ಶವ ಪೀಸ್ ಪೀಸ್ ಮಾಡಿದ್ದು, ಬಳಿಕ ಒಂದೊಂದು ತುಂಡನ್ನೂ ಒಂದೊಂದು ಕಡೆಗೆ ಎಸೆದ ಪ್ರಕರಣ ವರದಿಯಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಜ್ ಶರ್ಮಾ ಅಲಿಯಾಸ್ ಅಚಿತ್ಯಾ ಗೋವಿಂದ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ರಾಜಸ್ಥಾನದ ಉತ್ತರ ವಿಭಾಗದ ಡಿಸಿಪಿ ಪರಿಷ್ ದೇಶ್​​ಮುಖ್ ಶನಿವಾರ ತಿಳಿಸಿದ್ದಾರೆ.

ಡಿ. 11ರ ಭಾನುವಾರ ಅನುಜ್​ ಹಾಗೂ ಸಂಬಂಧಿ ಯುವತಿ ಮನೆಯಲ್ಲಿ ಇಬ್ಬರೇ ಇದ್ದಿದ್ದು, ಅನುಜ್ ದೆಹಲಿಗೆ ಹೋಗೋಣ ಎಂದರೆ ಆಕೆ ನಿರಾಕರಿಸಿದ್ದಳು. ಆಗ ಮಾತಿಗೆ ಮಾತು ಬೆಳೆದು ಆಕೆಯನ್ನು ಕೊಲೆ ಮಾಡಿದ್ದ. ನಂತರ ಆಕೆ ಕಾಣಿಸುತ್ತಿಲ್ಲ ಎಂದು ಪೊಲೀಸರಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದ.

ಅದಾಗ್ಯೂ ಪೊಲೀಸರು ಅನುಮಾನದ ಮೇಲೆ ಹೆಚ್ಚಿನ ವಿಚಾರಣೆ ನಡೆಸಿದಾಗ ಆತನೇ ಆಕೆಯನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದು ಬೆಳಕಿಗೆ ಬಂದಿತ್ತು. ನಂತರ ಶವವನ್ನು ಮಾರ್ಬಲ್ ಕಟರ್ ಮತ್ತು ಚಾಕುವಿನಿಂದ ಸುಮಾರು ಹತ್ತು ಪೀಸ್ ಮಾಡಿದ್ದ. ನಂತರ ಒಂದೊಂದು ತುಂಡನ್ನು ದೆಹಲಿಯ ಒಂದೊಂದು ನಿರ್ಜನ ಪ್ರದೇಶದಲ್ಲಿ ಎಸೆದಿದ್ದಾಗಿ ಹೇಳಿದ್ದ. ಬಹುತೇಕ ತುಂಡುಗಳನ್ನು ವಶಕ್ಕೆ ಪಡೆದಿದ್ದಾಗಿ ಹೇಳಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.