ಬಾಗಲಕೋಟೆ: ಎಗ್ ರೈಸ್ ಇಲ್ಲ, ಖಾಲಿ ಆಗಿದೆ ಎಂದಿದ್ದಕ್ಕೆ ಅಂಗಡಿ ಮಾಲೀಕನನ್ನೇ ಕೊಲೆ ಮಾಡಿದ ಪ್ರಕರಣವೊಂದು ನಡೆದಿದೆ. ಬಾಗಲಕೋಟೆ ಜಿಲ್ಲೆಯ ಅಮೀನಗಡದಲ್ಲಿ ನಿನ್ನೆ ಈ ಕೊಲೆ ಮಾಡಲಾಗಿದೆ.
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ಬಸ್ ನಿಲ್ದಾಣದ ಬಳಿ ಈ ಪ್ರಕರಣ ನಡೆದಿದೆ. ಇಲ್ಲಿನ ಅಂಗಡಿ ಮಾಲೀಕ ಗೈಬುಸಾಬ್ ಮುಲ್ಲಾ (29) ಕೊಲೆಯಾದ ದುರ್ದೈವಿ. ಮುಸ್ತಾಕ್ ಜಂಗಿ (23) ಕೊಲೆ ಆರೋಪಿ. ರಾತ್ರಿ ಅಂಗಡಿಗೆ ಬಂದಿದ್ದ ಮುಸ್ತಾಕ್, ಎಗ್ ರೈಸ್ ಕೇಳಿದ್ದಾನೆ. ಆದರೆ ಎಗ್ ರೈಸ್ ಖಾಲಿ ಆಗಿದ್ದರಿಂದ ಇಲ್ಲ ಎಂದು ಮಾಲೀಕ ಹೇಳಿದ್ದ.
ಇದನ್ನೂ ಓದಿ: ಈಗ ದೇಶದ ಅಭಿವೃದ್ಧಿಗೆ ಯಾವುದೇ ವಿಘ್ನವಿಲ್ಲ: ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನ ಗಣಪತಿಯನ್ನು ಸ್ಮರಿಸಿದ ಮೋದಿ
ಇದರಿಂದ ಸಿಟ್ಟಾದ ಮುಸ್ತಾಕ್, ಅಂಗಡಿ ಮಾಲೀಕನ ಕುತ್ತಿಗೆಗೆ ಚಾಕುವಿನಿಂದ ಇರಿದ್ದ. ಗಂಭೀರವಾಗಿ ಗಾಯಗೊಂಡ ಗೈಬುಸಾಬ್ ಸಾವಿಗೀಡಾಗಿದ್ದಾನೆ. ಮುಸ್ತಾಕ್ ಕಳ್ಳತನ ಸೇರಿದಂತೆ ಎರಡು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಸದ್ಯ ಜಾಮೀನಿನ ಮೇಲೆ ಹೊರಗಿದ್ದಾನೆ. ಸ್ಥಳಕ್ಕೆ ಅಮೀನಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.