ನ್ಯೂಸ್

ಬಸ್​ಗೆ ಸಿಲುಕಿದ ಬೈಕನ್ನು 12 ಕಿಮೀ ಎಳೆದೊಯ್ದ ಚಾಲಕ

ಉತ್ತರ ಪ್ರದೇಶ: ಇತ್ತೀಚಿನ ದಿನಗಳಲ್ಲಿ ಹಿಟ್ ಅಂಡ್ ರನ್ ಕೇಸ್​ಗಳು ಹೆಚ್ಚುತ್ತಿದ್ದು, ಪ್ರಯಾಣಿಕರು ಹಾಗೂ ಚಾಲಕರಿಗೆ ರಸ್ತೆ ಜಾಗೃತಿಯ ಬಗ್ಗೆ ಮನವರಿಕೆ ಮಾಡಬೇಕಾಗಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸೊಂದು ಮೋಟಾರ್‌ ಬೈಕಿಗೆ ಡಿಕ್ಕಿ ಹೊಡೆದು ಸುಮಾರು 12 ಕಿ.ಮೀ.ವರೆಗೆ ಎಳೆದೊಯ್ದ ಭೀಕರ ಘಟನೆ ನಡೆದಿದೆ.

ಉತ್ತರಪ್ರದೇಶದ ಸರ್ಕಾರಿ ಬಸ್​ ನಿನ್ನೆ ತಡರಾತ್ರಿ ಇಟಾದಿಂದ ದೆಹಲಿಗೆ ತೆರಳುತ್ತಿತ್ತು. ಈ ವೇಳೆ ಬೈಕ್ ಸವಾರ ವಿಕಾಸ್(25) ಎಂಬಾತನ ಮೇಲೆ ಬಸ್​ ಹರಿದಿದ್ದು, ಆತ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಇದರಿಂದ ಹೆದರಿದ ಬಸ್​ ಚಾಲಕ ಅತಿ ವೇಗವಾಗಿ ಬಸ್​ ಚಲಾಯಿಸಿದ್ದು, ಬಸ್​​ನ​ ಬಾನೆಟ್​​ಗೆ ಬೈಕ್​ ಸಿಲುಕಿ ಹಾಕಿಕೊಂಡಿದೆ.

ಬಳಿಕ ದಾರಿಹೋಕರು ಚಾಲಕನ ಈ ಕೃತ್ಯವನ್ನು ವಿಡಿಯೋ ಮಾಡಿ ಸಮೀಪದಲ್ಲಿದ್ದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ತಕ್ಷಣವೇ ಪೊಲೀಸರು ಮುಂದಿನ ಠಾಣೆಗೆ ಮಾಹಿತಿ ನೀಡಿ ಸುಮಾರು 12 ಕಿಲೋಮೀಟರ್ ದೂರು ಸಾಗಿ ಬಂದ ಬಸ್ಸನ್ನು ಪೊಲೀಸರು ತಡೆದು ಚಾಲಕನ್ನು ಬಂಧಿಸಿದ್ದಾರೆ. ನಂತರ ಮೃತ ದೇಹವನ್ನು ಶವಪರೀಕ್ಷೆಗೆ ಕಳುಹಿಸಿರುವ ಪೊಲೀಸರು ಈ ಕುರಿತು ತನಿಖೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ.(ಏಜೆನ್ಸೀಸ್​)