ನೋಯ್ಡಾ: ಎಂದಿನಂತೆ ಕೆಲಸ ಮುಗಿಸಿ ಮನೆಗೆ ಬಂದು ವಿಶ್ರಾಂತಿಸಬೇಕಿದ್ದ ಯುವಕನೊಬ್ಬ, ಆತ್ಮಹತ್ಯೆಗೆ ಶರಣಾಗಬೇಕೆಂದು ದೃಢವಾಗಿ ನಿರ್ಧರಿಸಿ, ತಾನು ವಾಸವಿದ್ದ 12ನೇ ಮಹಡಿಯ ಬಾಲ್ಕನಿಯಿಂದ ಜಿಗಿದ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ವರದಿಯಾಗಿದೆ.
ವಸತಿ ಕಟ್ಟಡದ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವಕನ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಆಘಾತಕಾರಿ ದೃಶ್ಯ ಸ್ಥಳೀಯರೊಬ್ಬರ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನೋಡುಗರನ್ನು ಒಂದು ನಿಮಿಷ ಆತಂಕಕ್ಕೆ ದೂಡಿದೆ. ಸಾಯಲು ದಿಟ್ಟ ಹೆಜ್ಜೆಯನ್ನು ಇಟ್ಟಿದ್ದ ಯುವಕನ ನಡೆಯನ್ನು ಸೂಕ್ಷ್ಮವಾಗಿ ಗಮನಿಸಿದ ಕಟ್ಟಡದ ನಿವಾಸಿಗಳು, ತಕ್ಷಣವೇ ಆತನ ಕೈಹಿಡಿದು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ಅಸಲಿಗೆ ಯುವಕ ಮೊದಲು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಲು ಮುಂದಾಗಿದ್ದ ಎಂಬುದೇ ಸದ್ಯ ಶಾಕಿಂಗ್ ಸಂಗತಿ.
ಕಟ್ಟಡದಿಂದ ಜಿಗಿಯುವ ಮುನ್ನ
12ನೇ ಮಹಡಿಯ ಬಾಲ್ಕನಿಯಿಂದ ಜಿಗಿಯುವ ಮೊದಲು ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಆತ ಯತ್ನಿಸಿದ್ದ. ಈ ವೇಳೆ ಯುವಕನ ಕೋಣೆಗೆ ಪ್ರವೇಶಿಸಿದ ಅಕ್ಕ-ಪಕ್ಕದವರು, ಆತನನ್ನು ಅಲ್ಲಿಂದ ರಕ್ಷಣೆ ಮಾಡಿದ್ದಾರೆ. ಇಷ್ಟಾದರೂ ಸುಮ್ಮನಾಗದ ಯುವಕ, ತಾನು ಸಾಯಲೇಬೇಕೆಂದು ದೃಢವಾಗಿ ನಿರ್ಧರಿಸಿದ್ದ ಕಾರಣ, ಅವರ ಕೈಯಿಂದ ತಪ್ಪಿಸಿಕೊಂಡು ಕಟ್ಟಡದಿಂದ ಜಿಗಿದಿದ್ದಾನೆ. ಅದೃಷ್ಟವಶಾತ್, ಅಲ್ಲಿಯೂ ಆತನ ಕೈಹಿಡಿದು ಎಳೆದ ಸ್ಥಳೀಯರು, ಎರಡನೇ ಬಾರಿಗೆ ಯುವಕನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉದ್ಯೋಗ ಕಳೆದುಕೊಂಡ ಸಂಕಟ
ಇತ್ತೀಚೆಗಷ್ಟೇ ಉದ್ಯೋಗ ಕಳೆದುಕೊಂಡಿದ್ದ ಯುವಕ, ಹಲವು ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಯಾರಿಂದಲೂ ಆತನಿಗೆ ಉತ್ತಮ ಸಂಭಾಷಣೆ, ಸಲಹೆ, ಭರವಸೆಯ ಮಾತುಗಳು ಸಿಗದ ಹಿನ್ನಲೆ ಮಾಸಿಕವಾಗಿ ಕುಗ್ಗಿ ಹೋಗಿದ್ದ. ಈ ಎಲ್ಲಾ ಕಾರಣಗಳಿಂದ ತೀವ್ರ ಮನನೊಂದ ಯುವಕ, ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).