ನ್ಯೂಸ್

ಮಾನವನು ದೇವರ ಸ್ವರೂಪ

ಬೈಬಲ್​ನ ಪ್ರಥಮ ಗ್ರಂಥ ಆದಿಕಾಂಡ ಪುಸ್ತಕದ ಅಧ್ಯಾಯ 1:26ರಲ್ಲಿ ಹೀಗೆ ಉಲ್ಲೇಖವಿದೆ. ‘ದೇವರು ಈ ಭೂಲೋಕವನ್ನು ಸೃಷ್ಟಿಸಿದ ನಂತರ ಹೀಗೆಂದರು: ನಮ್ಮ ಸ್ವರೂಪದಲ್ಲಿ ಮತ್ತು ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟು ಮಾಡೋಣ. ಹೀಗೆ ದೇವರು ಮಾನವನನ್ನು ತನ್ನ ಸ್ವರೂಪದಲ್ಲಿ ಸೃಷ್ಟಿಸಿದನು. ಅವನಿಗೆ ಇಡೀ ಭೂಲೋಕದ ಮೇಲೆ ದೊರೆತನವನ್ನು ನೀಡಿದನು. ಆತನನ್ನು ಘನತೆ ಹಾಗೂ ಗೌರವದಿಂದ ಅಲಂಕರಿಸಿದನು.’

ಇದೇ ವಿಷಯದ ಬಗ್ಗೆ ಬೈಬಲ್ ಗ್ರಂಥದ ಅತೀ ದೊಡ್ಡ ಗ್ರಂಥ ಕೀರ್ತನೆಗಳು, ಸಂಖ್ಯೆ 8 ರಲ್ಲಿ ಹೀಗೆ ಬರೆಯಲಾಗಿದೆ. ‘ದೇವರು ಮಾನವನನ್ನು ಅವನ ಸ್ವರೂಪದಲ್ಲಿ ರಚಿಸಿ ಪ್ರಭಾವವನ್ನೂ ಮಾನವನ್ನೂ ಅವನಿಗೆ ಕಿರೀಟವನ್ನಾಗಿ ಇಟ್ಟರು. ಮಾನವ, ಅಂದಿನಿಂದ ಘನತೆ ಹಾಗೂ ಗೌರವದಿಂದ ಬದುಕಿದನು.’ ಆದರೆ ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದಾಗ ಮಾನವ ಆತನ ಆರಂಭಿಕ ಘನತೆ- ಗೌರವವನ್ನು ಕಳೆದುಕೊಂಡು ಉಳ್ಳವರ ಕೈಯಡಿ ಗುಲಾಮರಂತೆ ಬದುಕುವ ತುಂಬಾ ನೋವಿನ ಸಂಗತಿ ಗಮನಿಸುತ್ತಿದ್ದೇವೆ.

ಇದಕ್ಕೆ ಶ್ರೇಷ್ಠ ಉದಾಹರಣೆ ಇದೇ ಫೆಬ್ರವರಿ ತಿಂಗಳಲ್ಲಿ ಅಮೆರಿಕದ ಅಧ್ಯಕ್ಷ ಟ್ರಂಪ್ ಭಾರತದ ಅಕ್ರಮ ವಲಸಿಗರನ್ನು ಕೈಕೊಳ ಹಾಕಿ ಹಾಗೂ ಕಾಲುಗಳನ್ನು ಸಂಕೋಲೆಯಿಂದ ಕಟ್ಟಿ ಅಮಾನವೀಯ ರೀತಿಯಲ್ಲಿ ಅವರನ್ನು ಅವರ ದೇಶಕ್ಕೆ ಹಿಂದೆ ಕಳುಹಿಸಿದ ರೀತಿ. ಇದನ್ನು ಗಮನಿಸಿದಾಗ ಮಾನವನ ಘನತೆ ಬಗ್ಗೆ ಆತನಿಗೆ ಕಿಂಚಿತ್ತೂ ಗೌರವ ಅಥವಾ ಅನುಕಂಪ ಇಲ್ಲದಂತೆ ಭಾಸವಾಗುತ್ತಿದೆ. ಟ್ರಂಪ್ ಸರ್ಕಾರದ ಈ ಅಮಾನವೀಯ ಕೃತ್ಯಗಳನ್ನು ಖಂಡಿಸಿ ಜಗದ್ಗುರು ಪೋಪ್ ಫ್ರಾನ್ಸಿಸ್ ಅಮೆರಿಕದ ಅಧ್ಯಕರಿಗೆ ಒಂದು ಎಚ್ಚರಿಕೆಯ ಮಾತು ಹೇಳುತ್ತಾರೆ.

‘ನೆನಪಿರಲಿ! ಈ ಭೂಮಿ ನಮ್ಮೆಲ್ಲರ ಸಾಮೂಹಿಕ ಮನೆ. ನಿರಾಶ್ರಿತರು, ಬಡವರು, ವಲಸಿಗರನ್ನು ನಮ್ಮ ಸಾಮೂಹಿಕ ಮನೆಗೆ ಸ್ವಾಗತಿಸುವುದು ನಮ್ಮ ಆದ್ಯ ಕರ್ತವ್ಯ. ಒಂದು ಮಾತು ತಿಳಿದಿರಲಿ. ದೇವರು ನಿರಾಶ್ರಿತರಿಗೆ, ವಲಸಿಗರಿಗೆ ಬಹಳ ಹತ್ತಿರವಿದ್ದಾನೆ.’