ನ್ಯೂಸ್

40ಕ್ಕೂ ಹೆಚ್ಚು ಅಪ್ರಾಪ್ತ ವಯಸ್ಕರಿಗೆ ಲೈಂಗಿಕ ಕಿರುಕುಳ; ವಿಚಾರಣೆ ವೇಳೆ ಹೊರಬಿತ್ತು ಸ್ಫೋಟಕ ಮಾಹಿತಿ

ಜೈಪುರ: ಆಘಅತಕಾರಿ ಘಟನೆ ಒಂದರಲ್ಲಿ ವ್ಯಕ್ತಿಯೋರ್ವ 40ಕ್ಕೂ ಹೆಚ್ಚು ಅಪ್ರಾಪ್ತ ವಯಸ್ಕರಿಗೆ ಲೈಂಗಿಕ ದೌರ್ಜನ್ಯ ಎಸಗಿ ಅದರ ಫೋಟೋ ಹಾಗೂ ವಿಡಿಯೋಗಳನ್ನು ಚಿತ್ರೀಕರಿಸಿ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಪಿಯನ್ನು ಮುಖೇಶ್​ ಕುಮಾರ್​ ದಮಾಮಿ ಎಂದು ಗುರುತಿಸಲಾಗಿದ್ದು, ಈತನನ್ನು ರಾಜಸ್ಥಾನದ ಜೋಧಪುರದಲ್ಲಿ ಬರ್ಮೆರ್​ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸ್ನೇಹ ಸಂಪಾದಿಸಿ ಕೃತ್ಯ

ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಬರ್ಮೆರ್​ ಜಿಲ್ಲೆಯ ಸಾಮ್​ಧಾರಿ ಪೊಲೀಸ್​ ಠಾಣೆಯ ಅಧಿಕಾರಿಯೊಬ್ಬರು ಬಂಧಿತ ಆರೋಪಿ ಮುಖೇಶ್​ ಮದುವೆ ಸಮಾರಂಭಗಳಲ್ಲಿ ಬ್ಯಾಂಡ್​ ಬಾರಿಸುತ್ತಿದ್ದ. ಮದುವೆ ಮನೆಗಳಲ್ಲಿ ಬಾಲಕಿ, ಯುವತಿ ಹಾಗೂ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಅವರ ಸ್ನೇಹವನ್ನು ಸಂಪಾದಿಸುತ್ತಿದ್ದ. ಬಳಿಕ ಚಾಟಿಂಗ್​ ಹಾಗೂ ವಿಡಿಯೋ ಕರೆಗಳ ಮೂಲಕ ಅವರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದ.

ದಿನ ಕಳೆದಂತೆ ಮಹಿಳೆಯರ ಜೊತೆ ವಿಡಿಯೋ ಕರೆಯಲ್ಲಿ ಮಾತನಾಡುತ್ತ ಅವರಿಗೆ ತಿಳಿಯದೆ ಸ್ಕ್ರೀನ್​ ರೆಕಾರ್ಡಿಂಗ್​ ಮಾಡಿ ಅದರ ಫೋಟೋಗಳನ್ನು ಎಡಿಟ್​ ಮಾಡುತ್ತಿದ್ದ. ಬಳಿಕ ಆ ಚಿತ್ರಗಳನ್ನು ಕಳಿಸಿ ಸಂತ್ರಸ್ತರನ್ನು ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಆರೋಪಿಯೂ ತನ್ನ ಸ್ವಂತ ಅತ್ತೆಯ ಮೇಲೂ ಸಹ ದೌರ್ಜನ್ಯ ಎಸಗಿದ ಕಾರಣ ಆತನ ಮದುವೆ ಮುರಿದು ಬಿದ್ದಿತ್ತು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

40ಕ್ಕೂ ಹೆಚ್ಚು ಬಾಲಕಿಯರಿಗೆ ಕಿರುಕುಳ

ಆರೋಪಿಯ ಹೇಯ ಕೃತ್ಯದಿಂದಾಗಿ ತಾಯಿ ಹಾಗೂ ಮಗಳು ಇಬ್ಬರು ಜೂನ್​ 6ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಂತ್ರಸ್ತರ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಅವರ ಫೋನ್​ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ತಲೆಮಾರಿಸಿಕೊಂಡಿದ್ದ ಮುಖೇಶ್​ನನ್ನು ಜೋಧ್​ಪುರದಲ್ಲಿ ಬಂಧಿಸಲಾಗಿದೆ.

ಆರೋಪಿಯಿಂದ ಪೆನ್​ಡ್ರೈವ್​ ಒಂದನ್ನು ವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ 40ಕ್ಕೂ ಹೆಚ್ಚು ಅಪ್ರಾಪ್ತ ವಯಸ್ಕ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ವಿಡಿಯೋಗಳನ್ನು ಸೆರೆ ಹಿಡಿಯಲಾಗಿದೆ. ಬಂಧಿತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸಾಮ್​ಧಾರಿ ಪೊಲೀಸ್​ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.