ಲಖನೌ: ಚಿರತೆಯನ್ನು ಸೆರೆಹಿಡಿಯಲು ಇಟ್ಟಿದ್ದ ಬೋನಿನಲ್ಲಿ ವ್ಯಕ್ತಿಯೊಬ್ಬ ಸಿಲುಕಿದ ಘಟನೆ ಉತ್ತರ ಪ್ರದೇಶದ ಬುಲಂದ್ಶಹರ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರ ಹುಬ್ಬೇರಿಸಿದೆ.
ಕೇರಳ, ಕರ್ನಾಟಕ, ಜಾರ್ಖಂಡ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಮಾನವ-ಪ್ರಾಣಿ ಸಂಘರ್ಷ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವು ಕಳವಳಕಾರಿ ಸಂಗತಿಯಾಗಿದೆ. ಬುಲಂದ್ಶಹರ್ ಜಿಲ್ಲೆಯ ಗ್ರಾಮದೊಂದರ ಸಮೀಪದಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದವು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಚಿರತೆ ಸೆರೆಹಿಡಿಯಲು ಸ್ಥಳೀಯ ಅರಣ್ಯಾಧಿಕಾರಿಗಳು ಬೋನ್ ಇಟ್ಟು, ಅದರೊಳಗೆ ಒಂದು ಕೋಳಿಯನ್ನು ಕಟ್ಟಿದ್ದರು.
ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಚಿರತೆ ಇರಬೇಕಾದ ಸ್ಥಳದಲ್ಲಿ ವ್ಯಕ್ತಿಯೊಬ್ಬ ಇರುವುದನ್ನು ಕಂಡ ಸ್ಥಳೀಯರು ಅಚ್ಚರಿಗೊಂಡಿದ್ದಾರೆ. ಬೋನ್ನಲ್ಲಿದ್ದ ಕೋಳಿಯನ್ನು ಹಿಡಿಯಲು ಹೋಗಿ ತಾನೇ ಬೋನಿನ ಒಳಗೆ ಸೆರೆಯಾಗಿದ್ದಾನೆ ಎಂದು ಹೇಳಲಾಗಿದೆ.
ಬೋನ್ನಿಂದ ಹೊರಬರಲು ಎಷ್ಟೇ ಪ್ರಯತ್ನ ಮಾಡಿದರೂ ಆತನಿಂದ ಸಾಧ್ಯವಾಗಲಿಲ್ಲ. ಕೊನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಆ ವ್ಯಕ್ತಿಯನ್ನು ಬಿಡುಗಡೆ ಮಾಡಿದರು. ಸದ್ಯ ಬೋನಿನಲ್ಲಿರುವ ವ್ಯಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗಿದೆ. (ಏಜೆನ್ಸೀಸ್)