

ನವದೆಹಲಿ: ಹಿಂಡನ್ಬರ್ಗ್ ವರದಿ ಪರಿಣಾಮ ಷೇರು ಮಾರುಕಟ್ಟೆಯಲ್ಲಿ ಅದಾನಿ ಸಮೂಹ ಕಂಪನಿಗಳ ಷೇರುಗಳಲ್ಲಿನ ಕುಸಿತ ಮುಂದುವರಿದಿದೆ. ಕಳೆದ ಒಂದು ತಿಂಗಳಲ್ಲಿ ಅದಾನಿ ಸಂಸ್ಥೆಯ 10 ಕಂಪನಿಗಳ ಹೂಡಿಕೆಯು ನೆಲಕಚ್ಚಿದ್ದು, ಗೌತಮ್ ಅದಾನಿಗೆ 12 ಲಕ್ಷ ಕೋಟಿ ರೂ. ನಷ್ಟವಾಗಿದೆ.
ಅದಾನಿ ಗ್ರೂಪ್ನ ಮಾರುಕಟ್ಟೆ ಬಂಡವಾಳವು ಜನವರಿ 24ರ ಮೊದಲು ಸುಮಾರು 19 ಲಕ್ಷ ಕೋಟಿ ರೂ.ಗಳಷ್ಟಿತ್ತು. ಆದರೆ ಅಮೆರಿಕ ಮೂಲದ ಹಿಂಡನ್ಬರ್ಗ್ ಸ್ಪೋಟಕ ವರದಿ ಬಿಡುಗಡೆ ಮಾಡಿದ ನಂತರ ಅದರ ಮೌಲ್ಯ ಸರಿಸುಮಾರು 7.2 ಲಕ್ಷ ಕೋಟಿಗೆ ಕುಸಿದಿದೆ. ಅದಾನಿ ಕಂಪನಿಯ ಏಳು ಪ್ರಮುಖ ಕಂಪನಿಗಳು ಶೇ.85ರಷ್ಟು ಕುಸಿತ ಕಂಡಿವೆ. ಅದಾನಿ ಟೋಟಲ್ ಗ್ಯಾಸ್, ಅದಾನಿ ಗ್ರೀನ್ ಎನರ್ಜಿ ಮತ್ತು ಅದಾನಿ ಟ್ರಾನ್ಸ್ಮಿಷನ್ಸ್ನಲ್ಲಿ ಭಾರಿ ನಷ್ಟ ಉಂಟಾಗಿದ್ದು, ಕೇವಲ ಒಂದು ತಿಂಗಳಲ್ಲಿ ಸುಮಾರು ಶೇ.80ರಷ್ಟು ಷೇರಿನ ಮೌಲ್ಯ ಕುಸಿದು, 52 ವಾರಗಳ ಕನಿಷ್ಠ ಮೌಲ್ಯ ತಲುಪಿವೆ. ಹಿಂಡನ್ಬರ್ಗ್ ವರದಿಯ ಒಂದು ತಿಂಗಳ ನಂತರ ಅದಾನಿ ಗ್ರೂಪ್ನ ಲಿಸ್ಟೆಡ್ ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಹೆಣಗಾಡುತ್ತಿವೆ. ಷೇರುಗಳು ಶೇ. 25ರಿಂದ 80ರಷ್ಟು ಕಡಿಮೆಯಾಗಿದೆ. ಅದಾನಿ ಅವರ ನಿವ್ವಳ ಮೌಲ್ಯವು 120 ಬಿಲಿಯನ್ ಡಾಲರ್ನಿಂದ 41 ಬಿಲಿಯನ್ ಡಾಲರ್ಗೆ ಕುಸಿದಿದೆ.
ಅದಾನಿ ಸಮೂಹದ 7 ಕಂಪನಿಗಳಲ್ಲಿ 30,127 ಕೋಟಿ ರೂ. ಹೂಡಿಕೆ ಮಾಡಿದ್ದ ಭಾರತೀಯ ಜೀವ ವಿಮಾ ನಿಗಮವು (ಎಲ್ಐಸಿ) ಈಗ ನಷ್ಟ ಅನುಭವಿಸುತ್ತಿದೆ. ಅದಾನಿ ಷೇರುಗಳಲ್ಲಿನ ಎಲ್ಐಸಿ ಹೂಡಿಕೆ ಮೌಲ್ಯ ಜನವರಿ 24ರಂದು 81,268 ಕೋಟಿಗಳಿಂದ 33,149 ಕೋಟಿ ರೂ.ಗೆ ಇಳಿದಿದೆ ಎಂದು ಮಾರುಕಟ್ಟೆಯ ಅಂಕಿ-ಅಂಶಗಳು ತೋರಿಸಿವೆ. ಹಿಂಡನ್ಬರ್ಗ್ ವರದಿ ಪರಿಣಾಮ ಎಲ್ಐಸಿ ಹೂಡಿಕೆ ಮೌಲ್ಯದಲ್ಲಿ ಕುಸಿತವುಂಟಾಗಿದೆ. ಎಲ್ಐಸಿ ಲಾಭವು ಈಗ 3 ಸಾವಿರ ಕೋಟಿ ರೂ.ಗೆ ಇಳಿದಿದೆ. ಅದಾನಿ ಷೇರುಗಳು ಕುಸಿಯುತ್ತಿರುವ ವಿಧಾನವನ್ನು ಗಮನಿಸಿದರೆ ಇದು ಶೀಘ್ರದಲ್ಲೇ ಎಲ್ಐಸಿಗೆ ನಷ್ಟವಾಗಿ ಬದಲಾಗುವ ಸಾಧ್ಯತೆಯಿದೆ. ಜನವರಿ 30ರಿಂದ ಎಲ್ಐಸಿ ಅದಾನಿ ಕಂಪನಿಗಳಲ್ಲಿ ಯಾವುದೇ ಷೇರು ಖರೀದಿಸಿಲ್ಲ ಅಥವಾ ಮಾರಾಟ ಮಾಡಿಲ್ಲ. ಇದರ ಆಧಾರದ ಮೇಲೆ ಮಾಡಿರುವ ವಿಶ್ಲೇಷಣೆ ಪ್ರಕಾರ, ಎಲ್ಲ ಅದಾನಿ ಗ್ರೂಪ್ ಕಂಪನಿಗಳ ಅಡಿಯಲ್ಲಿ ತನ್ನ ಒಟ್ಟು ಖರೀದಿ ಮೌಲ್ಯ 30,127 ಕೋಟಿ ರೂ. ಎಂದು ಎಲ್ಐಸಿ ಘೋಷಿಸಿದೆ.
ಉದ್ಯಮಿ ಗೌತಮ್ ಅದಾನಿ ಸಮೂಹ ಕುರಿತು ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನ್ಬರ್ಗ್ ವರದಿಯನ್ನು ಆಧರಿಸಿ ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ಈ ವಿಷಯವನ್ನು ಪ್ರಸ್ತಾಪಿಸಿದ ವಕೀಲ ಎಂ.ಎಲ್. ಶರ್ಮಾ ಅವರ ಮನವಿಯನ್ನು ತಿರಸ್ಕರಿಸಿತು. ಹಿಂಡನ್ಬರ್ಗ್ ವರದಿಯ ಹಿಂದೆ ಪಿತೂರಿ ಇದೆ ಎಂದು ಶರ್ಮಾ ಆರೋಪಿಸಿದ್ದಾರೆ. ‘ನಾವು ಮಾಧ್ಯಮಗಳಿಗೆ ಯಾವುದೇ ತಡೆಯಾಜ್ಞೆ ನೀಡುವುದಿಲ್ಲ. ಈ ವಿಷಯದಲ್ಲಿ ಶೀಘ್ರದಲ್ಲೇ ಆದೇಶ ಪ್ರಕಟಿಸುತ್ತೇವೆ’ ಎಂದು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ ಪರ್ದಿವಾಲಾ ಅವರಿದ್ದ ಪೀಠ ಹೇಳಿದೆ. ಅರ್ಜಿದಾರರೊಬ್ಬರ ಸಲಹೆ ಮತ್ತು ಪಿಐಎಲ್ಗಳ ಬ್ಯಾಚ್ನಲ್ಲಿ ಫೋರ್ಬ್ಸ್ ಪ್ರಕಟಿಸಿದ ವರದಿ ದಾಖಲಿಸಲು ಸುಪ್ರೀಂಕೋರ್ಟ್ ಸೋಮವಾರ ನಿರಾಕರಿಸಿತ್ತು. ಹಿಂಡನ್ಬರ್ಗ್ ರಿಸರ್ಚ್ ವರದಿ ಹೊರಬಿದ್ದ ನಂತರ ಅದಾನಿ ಗ್ರೂಪ್ ಷೇರುಗಳ ಕುಸಿತ ಕುರಿತು ಸುಪ್ರೀಂಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಸಂಬಂಧ ಸುಪ್ರೀಂಕೋರ್ಟ್ ಫೆಬ್ರವರಿ 20ರಂದು ತನ್ನ ಆದೇಶವನ್ನು ಕಾಯ್ದಿರಿಸಿತ್ತು. ಫೆಬ್ರವರಿ 17 ರಂದು ಸುಪ್ರೀಂಕೋರ್ಟ್ ಷೇರು ಮಾರುಕಟ್ಟೆಗೆ ನಿಯಂತ್ರಣ ಕ್ರಮಗಳನ್ನು ಬಲಪಡಿಸುವ ಉದ್ದೇಶಿತ ತಜ್ಞರ ಸಮಿತಿ ಕುರಿತು ಕೇಂದ್ರದ ಸಲಹೆ ಮುಚ್ಚಿದ ಲಕೋಟೆಯಲ್ಲಿ ಸ್ವೀಕರಿಸಿಲು ನಿರಾಕರಿಸಿತ್ತು.
ಢಾಕಾ: ಬಾಂಗ್ಲಾದೇಶಕ್ಕೆ ಕಡಿಮೆ ದರದಲ್ಲಿ ವಿದ್ಯುತ್ ಪೂರೈಸುವುದಾಗಿ ಅದಾನಿ ಪವರ್ ಭರವಸೆ ನೀಡಿದೆ. ಕಲ್ಲಿದ್ದಲು-ಉತ್ಪಾದಿತ ವಿದ್ಯುತ್ ಬೆಲೆ ದುಬಾರಿಯಾದ ಕಾರಣ ಅದಾನಿ ಪವರ್ ಜತೆ 2017ರಲ್ಲಿ ಮಾಡಿಕೊಂಡಿದ್ದ ವಿದ್ಯುತ್ ಖರೀದಿ ಒಪ್ಪಂದ ಪರಿಷ್ಕರಿಸಲು ಬಾಂಗ್ಲಾದೇಶದ ಸರ್ಕಾರಿ ವಿದ್ಯುತ್ ಅಭಿವೃದ್ಧಿ ಮಂಡಳಿ (ಪಿಡಿಬಿ) ಪ್ರಯತ್ನಿಸಿತ್ತು. ಅದಾನಿ ಪವರ್ ಬಾಂಗ್ಲಾದೇಶದ ಅಧಿಕಾರಿಗಳೊಂದಿಗೆ ಸಂಧಾನಕ್ಕಾಗಿ ಐದು ಸದಸ್ಯರ ನಿಯೋಗವನ್ನು ಕಳುಹಿಸಿದೆ. ಈ ವೇಳೆ ಮಾತುಕತೆ ಅಂತಿಮಗೊಂಡಿದೆ ಎನ್ನಲಾಗಿದೆ. ಬಾಂಗ್ಲಾದೇಶವು ಪ್ರಸ್ತುತ ಭಾರತದಿಂದ 1,160 ಮೆಗಾವಾಟ್ ವಿದ್ಯುತ್ ಆಮದು ಮಾಡಿಕೊಳ್ಳುತ್ತಿದೆ. 2017ರ ಒಪ್ಪಂದ ಪ್ರಕಾರ ಅದಾನಿ ಪವರ್ನಿಂದ 25 ವರ್ಷಗಳವರೆಗೆ ವಿದ್ಯುತ್ ಖರೀದಿಸಲು ಬಾಂಗ್ಲಾದೇಶಕ್ಕೆ ಅವಕಾಶವಿದೆ. ಅದಾನಿ ಪವರ್ ಉಲ್ಲೇಖಿಸಿದ ಕಲ್ಲಿದ್ದಲು ಬೆಲೆ (400 ಡಾಲರ್/ ಎಂಟಿ) ದುಬಾರಿಯಾಗಿದೆ. ಇದು 250 ಡಾಲರ್/ಎಂಟಿಗಿಂತ ಕಡಿಮೆಯಿರಬೇಕು ಎಂದು ಅಲ್ಲಿನ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನವದೆಹಲಿ: ಷೇರುಪೇಟೆಯಲ್ಲಿ ಅದಾನಿ ಸಮೂಹದ ಬಹುತೇಕ ಸಂಸ್ಥೆಗಳು ಶುಕ್ರವಾರವೂ ಕುಸಿತ ಮುಂದುವರಿಸಿವೆ. ಅದಾನಿ ಟ್ರಾನ್ಸ್ಮಿಷನ್ ಶೇ.5, ಅದಾನಿ ಗ್ರೀನ್ ಎನರ್ಜಿ ಶೇ.5, ಅದಾನಿ ಟೋಟಲ್ ಗ್ಯಾಸ್ ಶೇ.5, ಅದಾನಿ ಎಂಟರ್ಪ್ರೖೆಸಸ್ ಶೇ. 4.98ರಷ್ಟು ಕುಸಿತ ಕಂಡಿವೆ. ಅದಾನಿ ಪವರ್ ಶೇ. 4.98, ಎನ್ಡಿಟಿವಿ ಶೇ. 4.05 ಮತ್ತು ಅದಾನಿ ವಿಲ್ಮರ್ ಶೇ. 3.35 ಕುಸಿತ ಕಂಡಿವೆ. ಆದರೆ ಅಂಬುಜಾ ಸಿಮೆಂಟ್ ಶೇ. 2.45, ಅದಾನಿ ಪೋರ್ಟ್ ಶೇ. 1.24 ಮತ್ತು ಎಸಿಸಿ ಶೇ 0.03 ರಷ್ಟು ಏರಿಕೆ ಕಂಡಿವೆ. ಅದಾನಿ ಗ್ರೂಪ್ನ ಹತ್ತು ಸಂಸ್ಥೆಗಳ ಪೈಕಿ ಎಂಟು ಸಂಸ್ಥೆಗಳ ಷೇರುಗಳು ನಕಾರಾತ್ಮಕವಾಗಿ ಕೊನೆಗೊಂಡಿವೆ. ಶುಕ್ರವಾರ ಸೆನ್ಸೆಕ್ಸ್ 141.87 ಅಂಶ ಕುಸಿತ ಕಂಡು 59,463.93ರಲ್ಲಿ ಮುಕ್ತಾಯವಾಗಿದೆ.