ನ್ಯೂಸ್

ಕಾಣೆಯಾಗಿದ್ದ ಗಂಡ ಸಿಗೋದಕ್ಕೆ ಸಹಾಯವಾಗಿದ್ದು ಆ ವೈರಲ್​ ವಿಡಿಯೋ! ಅಧಿಕಾರಿಗಳ ತಪ್ಪಿನಿಂದಲೇ ಈ ಕುಟುಂಬಕ್ಕೆ ಒಳ್ಳೆಯದಾಯ್ತು!

Mandara

ಇಂದೋರ್​: ಕೆಲವು ತಪ್ಪುಗಳು ಯಾವುದೋ ಒಂದು ಒಳ್ಳೆಯದಕ್ಕೆ ದಾರಿ ಮಾಡಿಕೊಡುತ್ತದೆಯಂತೆ. ಅಂತೆಯೇ ಮಧ್ಯಪ್ರದೇಶದ ಇಂದೋರ್​ ಸಿವಿಕ್​ ಬಾಡಿ ಮಾಡಿದ ಒಂದು ತಪ್ಪಿನಿಂದಾಗಿ ಒಂದು ಕುಟುಂಬ ಒಂದಾಗಿದೆ. ಗಂಡನ ಕಳೆದುಕೊಂಡು ಹುಡುಕಾಡುತ್ತಿದ್ದ ಮಹಿಳೆಯೊಬ್ಬಳಿಗೆ ಆಕೆಯ ಗಂಡ ಸಿಗುವಂತಾಗಿದೆ.

ಇಂದೋರ್​ನ ಸಿವಿಕ್​ ಬಾಡಿಯು ಇತ್ತೀಚೆಗೆ ನಗರದಲ್ಲಿ ಮನೆಯಿಲ್ಲದೆ ರಸ್ತೆ ಬದಿ ಕುಳಿತಿದ್ದ ಒಂದಿಷ್ಟು ಜನರನ್ನು ಗಾಡಿಯೊಂದರಲ್ಲಿ ತುಂಬಿಕೊಂಡು ಕರೆದುಕೊಂಡು ಹೋಗಿ ನಗರದಿಂದ ಹೊರಗೆ ಬಿಟ್ಟಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್​ ವೈರಲ್​ ಆಗಿತ್ತು. ಅವರನ್ನು ಬಿಟ್ಟು ಬಂದ ಸ್ಥಳಕ್ಕೆ ಹೋಗಿ ಫೋಟೋ ಹೊಡೆದು ಸಾಕಷ್ಟು ಜನರು ಪೋಸ್ಟ್​ ಮಾಡಿದ್ದರು ಕೂಡ.

ಒಂದು ತಿಂಗಳ ಹಿಂದೆ 48 ವರ್ಷದ ಪುಷ್ಪಾ ಸಾಲ್ವಿ ಹೆಸರಿನ ಮಹಿಳೆಯ ಗಂಡ ಕಾಣೆಯಾಗಿದ್ದನಂತೆ. ಮಾನಸಿಕ ಅಸ್ವಸ್ಥನಾಗಿರುವ ಅನಿಲ್​ ಸಾಲ್ವಿ ಕಾಣೆಯಾಗಿದ್ದಾನೆ ಎಂದು ಮಹಿಳೆ ಪೊಲೀಸ್ ದೂರನ್ನೂ ದಾಖಲಿಸಿದ್ದಳು. ಆದರೆ ಹುಡುಕುವ ಪ್ರಯತ್ನವೇನು ಆಗಿರಲಿಲ್ಲವಂತೆ. ಜನವರಿ 29ರಂದು ಮಹಿಳೆಗೆ ಅಪರಿಚಿತರಿಂದ ಕರೆ ಬಂದಿದೆ. ನಿಮ್ಮ ಗಂಡನನ್ನು ಮನೆಯಿಲ್ಲವರ ಜತೆ ಕರೆದುಕೊಂಡು ಬಂದು ಇಂದೋರ್‌ನ ಹೊರವಲಯದಲ್ಲಿರುವ ನಿಪಾನಿಯಾ ಬೈಪಾಸ್ ರಸ್ತೆಯಲ್ಲಿ ಕೂರಿಸಲಾಗಿದೆ ಎಂದು ಹೇಳಲಾಗಿದೆ. ತಕ್ಷಣ ಮಹಿಳೆ ಆ ಸ್ಥಳಕ್ಕೆ ಹೋಗಿದ್ದಾಳೆ. ಗಂಡನನ್ನು ಕರೆದುಕೊಂಡು, ಮಾನಸಿಕ ಅಸ್ವಸ್ಥರ ಆಸ್ಪತ್ರೆಗೆ ತೆರಳಿದ್ದು, ಅಲ್ಲಿಂದ ಮನೆಗೆ ಬಂದಿದ್ದಾಳೆ.

ಸಿವಿಕ್​ ಬಾಡಿಯಿಂದ ನನಗೆ ಯಾವುದೇ ರೀತಿಯ ಸಹಾಯವಾಗಲಿಲ್ಲ. ನನ್ನ ಗಂಡನನ್ನು ಮನೆಗೆ ವಾಪಾಸು ಕರೆದುಕೊಂಡು ಬರಲು ಅವರು ಸಹಾಯ ಮಾಡಲು ಮುಂದೆ ಬರಲಿಲ್ಲ ಎಂದು ಮಹಿಳೆ ದೂರಿದ್ದಾಳೆ. (ಏಜೆನ್ಸೀಸ್​)