ನ್ಯೂಯಾರ್ಕ್: ಒಂದೇ ಒಂದು ವರ್ಷದ ಜೈಲು ಶಿಕ್ಷೆ ಅನುಭವಿಸುವುದಕ್ಕೆ ಸಿದ್ಧನಿಲ್ಲದ ಕಳ್ಳನೊಬ್ಬ ವಕೀಲರ ಮೂಲಕ ಡೆತ್ ಸರ್ಟಿಫಿಕೇಟ್ ಅನ್ನು ಕೋರ್ಟ್ಗೆ ಹಾಜರುಪಡಿಸಿದ! ಅದರಲ್ಲಿದ್ದ ಸ್ಪೆಲ್ಲಿಂಗ್ ಮಿಸ್ಟೇಕ್ಸ್ ನೋಡಿ ಸಂದೇಹಗೊಂಡ ಜಡ್ಜ್, ಸರ್ಟಿಫಿಕೇಟನ್ನೇ ಪರಿಶೀಲನೆಗೊಪ್ಪಿಸಿದ್ರು!
ಕಳ್ಳನ ಹೆಸರು ರಾಬರ್ಟ್ ಬರ್ಗರ್. ವಯಸ್ಸು 25. ಆತ ಕಳ್ಳತನ ಪ್ರಕರಣವೊಂದರ ಅಪರಾಧಿ. ಈ ಸಂಬಂಧ ವಿಚಾರಣೆ ನಡೆದು ಒಂದು ವರ್ಷ ಜೈಲು ಶಿಕ್ಷೆ ಕೂಡ ಜನವರಿಯಲ್ಲಿ ಘೋಷಣೆಯಾಗಿತ್ತು. ಆದರೆ ಆತ ಕಳೆದ ಅಕ್ಟೋಬರ್ ತಿಂಗಳಿಂದ ತಲೆಮರೆಸಿಕೊಂಡು ತಿರುತ್ತಿದ್ದಾನೆ. ಶತಾಯ ಗತಾಯ ಜೈಲು ಶಿಕ್ಷೆಯಿಂದ ಪಾರಾಗಬೇಕು ಎಂಬುದು ಆತನ ಇರಾದೆಯಾಗಿತ್ತು.
ಇದನ್ನೂ ಓದಿ: ಒಂದಿಷ್ಟು ಶುಲ್ಕ ಪಾವತಿಸಿದ್ರೆ 2 ಕೋಟಿ ನಿಮ್ದಾಗುತ್ತೆ, ಯಾಕೆ ಕಳ್ಕೋತೀರಿ? ಎಂದು ಹೇಳ್ತಾನೇ ವಂಚಿಸಿದ್ರು ನೋಡಿ..!
ಈ ಪ್ರಯತ್ನದ ನಡುವೆ ತನ್ನ ಇಚ್ಛೆಗೆ ತಕ್ಕಂತೆ ವಕೀಲರ ಮನಸ್ಸನ್ನೂ ಆತ ಒಲಿಸಿಕೊಂಡುಬಿಟ್ಟ. ನಕಲಿ ಡೆತ್ ಸರ್ಟಿಫಿಕೇಟ್ ಅನ್ನು ಕೋರ್ಟ್ನಲ್ಲಿ ಸಲ್ಲಿಸುವಂತೆ ಮನವಿ ಮಾಡಿದ್ದ. ಆ ಸರ್ಟಿಫಿಕೇಟ್ ಹೇಗಿತ್ತು ಎಂದರೆ ನ್ಯೂಜೆರ್ಸಿಯ ಡಿಪಾರ್ಟ್ಮೆಂಟ್ ಆಫ್ ಹೆಲ್ತ್ ವೈಟಲ್ ಸ್ಟ್ಯಾಟಿಸ್ಟಿಕ್ಸ್ ಆ್ಯಂಡ್ ರೆಜಿಸ್ಟ್ರಿ ನೀಡಿರುವ ಮರಣ ಪ್ರಮಾಣ ಪತ್ರದಂತೆಯೇ ಇತ್ತು. ಒಂದೇ ಒಂದು ತಪ್ಪಾಗಿತ್ತು. Registry ಬದಲು “Regsitry" ಎಂದಾಗಿತ್ತು. ಇದೊಂದೇ ಸಾಕಾಯ್ತು ಪ್ರಮಾಣ ಪತ್ರ ನಕಲಿ ಎನ್ನೋದಕ್ಕೆ.ಫಾಂಟ್ ಸೈಸ್ನಲ್ಲೂ ವ್ಯತ್ಯಾಸವಿತ್ತು.ಇಲಾಖೆ ಕೂಡ ಪ್ರಮಾಣಪತ್ರ ನಕಲಿ ಎಂಬುದನ್ನು ದೃಢೀಕರಿಸಿತು.
ಮಂಗಳವಾರ ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಬರ್ಗರ್ಗೆ ಒಂದು ಡಾಲರ್ ಠೇವಣಿಯೊಂದಿಗೆ ಜಾಮೀನು ನೀಡಿ, ಜುಲೈ 29ಕ್ಕೆ ವಿಚಾರಣೆ ಮುಂದೂಡಿತು.ಈ ಪ್ರಕರಣದಲ್ಲಿ ಅಪರಾಧ ಸಾಬೀತಾದರೆ ಹಳೆಯ ಒಂದು ವರ್ಷದ ಜೈಲು ಶಿಕ್ಷೆ ಜೊತೆಗೆ ಇನ್ನೂ ನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾದೀತು ಬರ್ಗರ್.(ಏಜೆನ್ಸೀಸ್)