ಅಮರಾವತಿ: ಆಧುನಿಕ ಜಗತ್ತಿನಲ್ಲಿ ಎಲ್ಲಿ ನೋಡಿದರೂ ಮೊಬೈಲ್, ಕ್ಯಾಮರಾ ಕಣ್ಣಿಗೆ ಬೀಳುತ್ತಲೇ ಇರುತ್ತದೆ. ಇತ್ತೀಚೆಗಂತೂ ಜನರು ಸೆಲ್ಫಿ ತೆಗೆದುಕೊಳ್ಳುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಮದುವೆ, ಟ್ರಿಪ್ ಹೀಗೆ ಎಲ್ಲಿ ಹೋದರೂ ಅಲ್ಲೊಂದಿಷ್ಟು ಸೆಲ್ಫಿ ಇದ್ದೇ ಇರುತ್ತೆ. ಆದರೆ, ಇಲ್ಲೊಬ್ಬ ವ್ಯಕ್ತಿ ಸೆಲ್ಫಿ ತೆಗೆಯಲು ಹೋಗಿ ದುರಂತಕ್ಕೀಡಾದ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಘಟನೆಯು ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರ ಝೂಲಾಜಿಕಲ್ ಪಾರ್ಕ್‌ನಲ್ಲಿ ನಡೆದಿದ್ದು, ಮೃತ ವ್ಯಕ್ತಿಯನ್ನು ರಾಜಸ್ಥಾನದ ಅಲ್ವಾರ್ ಮೂಲದ ಪ್ರಹ್ಲಾದ್ ಗುಜ್ಜರ್ (38) ಎಂದು ಗುರುತಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಝೂಲಾಜಿಕಲ್ ಪಾರ್ಕ್‌ನ ಅಧಿಕಾರಿ ಸೆಲ್ವಂ, ಗುಜ್ಜರ್ ನಿರ್ವಾಹಕರು ಮತ್ತು ವೈದ್ಯಕೀಯ ಸಿಬ್ಬಂದಿಗಾಗಿ ಮೀಸಲಿಟ್ಟಿರುವ ಪ್ರವೇಶ ದ್ವಾರದಿಂದ ಸಿಂಹಗಳಿರುವ ಗುಹೆಗೆ ತೆರಳಿದ್ದಾನೆ. ಗುಜ್ಜರ್ ಸಿಂಹಗಳಿರುವ ಗುಹೆ ಪ್ರವೇಶಿಸುತ್ತಿರುವುದನ್ನು ಗಮನಿಸಿದ ಪ್ರಾಣಿ ಪಾಲಕರು ಕೂಡಲೇ ಆತನನ್ನು ವಾಪಸ್ ಬರುವಂತೆ ಹೇಳಿದ್ದು, ಇದಕ್ಕೆ ಆತ ಒಪ್ಪಿಲ್ಲ.
25 ಅಡಿ ಎತ್ತರದ ಬೇಲಿಯನ್ನು ಹಾರಿ ಸಿಂಹಗಳಿರುವ ಜಾಗಕ್ಕೆ ವ್ಯಕ್ತಿ ಜಿಗಿದಿದ್ದು, ಸೆಲ್ಫಿ ತೆಗೆಯಲು ಯತ್ನಿಸಿದ್ದಾನೆ. ಡೊಂಗಲ್‌ಪುರ ಎಂಬ ಹೆಸರಿನ ಸಿಂಹವು ಆತನ ಮೇಲೆ ದಾಳಿ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರು ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಕುಟುಂಬಸ್ಥರನ್ನು ಸಂಪರ್ಕಿಸಲಾಗಿದ್ದು, ಅವರಿಗೆ ವಿಚಾರ ತಿಳಿಸಿದ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಝೂಲಾಜಿಕಲ್ ಪಾರ್ಕ್‌ನ ಸೆಲ್ವಂ ತಿಳಿಸಿದ್ದಾರೆ.