

ಬೆಂಗಳೂರು: ವಸತಿ ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಹಬ್ಬವನ್ನು ಆಚರಿಸುವಂತಿಲ್ಲ ಎಂದು ರಾಜ್ಯ ಸರ್ಕಾರದ ಅಂಗ ಸಂಸ್ಥೆಯಾದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆದಿದೆ.
ರಾಷ್ಟ್ರೀಯ ಹಬ್ಬ, ನಾಡಹಬ್ಬ ಹಾಗೂ ಜಯಂತಿಗಳನ್ನು ಹೊರತುಪಡಿಸಿ, ಯುಗಾದಿ, ರಂಜಾನ್, ಕ್ರಿಸ್‌ಮಸ್‌ನಂತಹ ಧಾರ್ಮಿಕ ಹಬ್ಬವನ್ನು ಆಚರಿಸುವಂತಿಲ್ಲ. ಎಲ್ಲಾ ವಸತಿ ಶಾಲಾ- ಕಾಲೇಜುಗಳಲ್ಲಿ ಸರ್ಕಾರದ ಸೂಚನೆಯಂತೆ ರಾಷ್ಟ್ರೀಯ ಹಬ್ಬಗಳನ್ನು ಮಾತ್ರ ಆಚರಣೆ ಮಾಡಬೇಕು ಎಂದು ಸರ್ಕಾರ ಸುತ್ತೋಲೆಯನ್ನು ಹೊರಡಿಸಿತ್ತು.
ಸುತ್ತೋಲೆ ಹೊರಡಿಸಿದ ಕೆಲವೇ ಕ್ಷಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಇದೀಗ ತನ್ನ ನಿರ್ಬಂಧ ಆದೇಶವನ್ನು ಹಿಂಪಡೆದಿದೆ.
ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ ಅವರ ಸೂಚನೆ ಮೇರೆಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಈ ಸುತ್ತೋಲೆಯನ್ನು ಹೊರಡಿಸಿತ್ತು. ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ, ಕನ್ನಡ ರಾಜ್ಯೋತ್ಸವ, ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ, ವಾಲ್ಮೀಕಿ ಜಯಂತಿ, ಕನಕದಾಸ ಜಯಂತಿ, ಬಸವ ಜಯಂತಿ, ಸಂವಿಧಾನ ಜಯಂತಿ, ಯೋಗ ದಿನಾಚರಣೆ ಹೊರತುಪಡಿಸಿ ಧಾರ್ಮಿಕ ಹಬ್ಬವನ್ನು ಆಚರಿಸುವುದು ಕಂಡುಬಂದಲ್ಲಿ ಸಂಬಂಧ ಪಟ್ಟ ಪ್ರಾಂಶುಪಾಲ ಹಾಗೂ ಸಿಬ್ಬಂದಿ ವಿರುದ್ಧ ನಿಯಮನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿತ್ತು.