ಮುಂಬೈ: ಅಪರಾಧ ಎಷ್ಟೇ ಹಳೆಯದಾದರೂ ಅದನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ಯಾರೋ ಸರಿಯಾಗಿ ಹೇಳಿದ್ದಾರೆ. ಕೊಲೆ ಮಾಡ ಪರಾರಿಯಾಗಿದ್ದ ಆರೋಪಿಯ್ನು ಪೊಲೀಸರು ಆತನ ಟ್ಯಾಟೂವಿನ ಸಹಾಯದಿಂದ 7 ವರ್ಷದ ಬಳಿಕ ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ನಡೆದಿದೆ.
ಶಿವಬಾಬು ನಿಶಾದ್(27) ಎಂಬಾತ ತನ್ನ ಸಹಚರರೊಂದಿಗೆ ಸುಭಾಶ್ಚಂದ್ರ(21) ಎಂಬ ಯುವಕನ ಸೊತ್ತುಗಳನ್ನು ಕದ್ದು ಕತ್ತು ಹಿಸುಕಿ ಕೊಲೆ ಮಾಡಿ ನಂತರ ಆತನ ಶವವನ್ನು ಗೋಣಿ ಚೀಲದಲ್ಲಿ ಸುತ್ತಿ ಎಸೆದಿದ್ದ. ವಾಸ್ತವವಾಗಿ, ಈ ಕೊಲೆಯ ಘಟನೆಯು 2016ರ ಮಾರ್ಚ್ನಲ್ಲಿ ನಡೆದಿತ್ತು. ಈ ಕೊಲೆಯಲ್ಲಿ ನಿಶಾದ್ ಒಬ್ಬನೇ ಅಲ್ಲ. ಅವನ ಜೊತೆ ಅವನ ಗೆಳೆಯರೂ ಇದ್ದು, ತನಿಖೆ ನಡೆಸಿದ್ದ ಪೊಲೀಸರು ರವಿ ಡಂಗೂರ್, ಅಭಿಜೀತ್ ಮಿಶ್ರಾ ಹಾಗೂ ಇದಲ್ಲದೇ ಕೊಲೆಯಾದ ಸಂದರ್ಭದಲ್ಲಿ ಅಪ್ರಾಪ್ತನಾಗಿದ್ದ ಬಾಲಕನನ್ನು ಬಂಧಿಸಿದ್ದರು. ಆ ಬಳಿಕ ಅವರು ಜಾಮೀನಿನ ಮೇಲೆ ಹೊರಗಿದ್ದರು.
ಆದರೆ ಶಿವಬಾಬು ಮಾತ್ರ ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದನು. ಈ ಕೃತ್ಯ ಎಸಗಿದಾಗ ಆರೋಪಿ ನಿಶಾದ್ಗೆ ಕೇವಲ 20 ವರ್ಷವಾಗಿತ್ತು. ಇತ್ತೀಚಿಗೆ ಬಾಕಿ ಉಳಿದಿರುವ ಪ್ರಕರಣದ ತನಿಖೆ ನಡೆಸಿದಾಗ, ಆರೋಪಿಯು ಯುಪಿಯಲ್ಲಿದ್ದಾನೆ ಎಂದು ವಸಾಯಿ ಕ್ರೈಂ ಬ್ರಾಂಚ್‌ಗೆ ತಿಳಿದು ಬಂದಿದೆ. ಇದಾದ ಬಳಿಕ ಪೊಲೀಸರು ಆತನ ಜಾಡು ಹಿಡಿದು ಹೋಗಿದ್ದು, ಕೊನೆಗೆ ಅವರಿಗೆ ಆತನ ಏಳು ವರ್ಷದ ಹಿಂದಿನ ಫೋಟೋ ಸಿಕ್ಕಿದೆ.ಇದರಲ್ಲಿ ಆತನ ಬಲಗೈ ಮೇಲೆ ತನ್ನ ಹೆಸರಿನ ಹಚ್ಚೆ ಮತ್ತು ಕೈಯಲ್ಲಿ ನಕ್ಷತ್ರಗಳನ್ನು ಹಾಕಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ಇದನ್ನೂ ಓದಿ: ಹಾಸಿಗೆ ಕೆಳಗೆ ಪತ್ತೆಯಾಯ್ತು 12 ವರ್ಷದ ಬಾಲಕನ ಮೃತದೇಹ: ಸ್ನೇಹಿತನನ್ನು ನೋಡಿ ಉಳಿದವರಿಗೆ ಶಾಕ್..!
ಆ ಬಳಿಕ ಪೋಲಿಸರು ಈತನನ್ನು ವಶಕ್ಕೆ ಪಡೆದಾಗ ಈತ ತನ್ನ ಕೈಯಿಂದ ಹಚ್ಚೆ ತೆಗೆದಿರುವುದು ಕಂಡುಬಂದಿದ್ದು, ಆದರೆ ಆತನ ಕೈನಲ್ಲಿದ್ದ ಮೂರು ನಕ್ಷತ್ರಗಳು ಇನ್ನೂ ಹಾಗೇ ಇದ್ದವು. ಇದೇ ನಕ್ಷತ್ರಗಳು ಆತನನ್ನು ಪೊಲೀಸರಿಗೆ ಈತನೇ ನಿಜವಾದ ಆರೋಪಿ ಎಂದು ಸುಳಿವನ್ನು ನೀಡಿದ್ದು, ಪೊಲೀಸರು ಈ ಬಗ್ಗೆ ಕೇಳಿದ್ದಾರೆ. ಈ ವೇಳೆ ಆತ ತನ್ನ ಅಪರಾಧವನ್ನು ಒಪ್ಪಿಕೊಂಡು 2016ರಲ್ಲಿ ಈ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ.(ಏಜೆನ್ಸೀಸ್)