ಚಾಮರಾಜನಗರ: ಮನಸಾರೆ ಪ್ರೀತಿಸಿದ್ದ ಯುವಕ ಮದುವೆಯಾಗಲು ಒಪ್ಪಲಿಲ್ಲ ಅನ್ನುವ ಕಾರಣಕ್ಕೆ ಯುವತಿಯೊಬ್ಬಳು ಪ್ರಾಣವನ್ನೇ ಬಿಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಅಪ್ರಾಪ್ತ ವಯಸ್ಸಿನಲ್ಲೇ ಶುರುವಾಗಿದ್ದ ಒನ್ ವೇ ಲವ್ ಸ್ಟೋರಿ ಇದೀಗ ದುರಂತ ಅಂತ್ಯ ಕಂಡಿದೆ.
ಇದನ್ನೂ ಓದಿ: ಪಕ್ಕದ ಮನೆಯ ಬಾಲಕಿಯನ್ನೇ ರೇಪ್ ಮಾಡಿದ 61 ವರ್ಷದ ವೃದ್ಧ! ಬಾಲಕಿ ಹೇಳಿದರೂ ತಲೆಯೇ ಕೆಡಿಸಿಕೊಳ್ಳದ ಪೋಷಕರು
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರಿನ ಬೀಚಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಂದಿನಿ(19) ನೇಣಿಗೆ ಶರಣಾದ ಯುವತಿ. ಈಕೆ ಅಪ್ರಾಪ್ತ ವಯಸ್ಸಿನಲ್ಲೇ ಅದೇ ಗ್ರಾಮದ ಯೋಗೇಶ್ ಎಂಬಾತನನ್ನ ಪ್ರೀತಿಸುತ್ತಿದ್ದಳು. ಮನೆಯವರಿಗೆ ಈಕೆಯ ಪ್ರೀತಿಯ ವಿಚಾರ ತಿಳಿದು ಮದುವೆ ಮಾಡಿಕೊಡಲು ಒಪ್ಪಿಕೊಂಡಿದ್ದರು. ಕಳೆದ ಆರು ತಿಂಗಳ ಹಿಂದೆ ಎರಡು ಮನೆಯವರು ಕುಳಿತು ಮದುವೆ ಮಾತು ಕತೆ ನಡೆಸಿದ್ದರು.
ಈ ಮಧ್ಯೆ ಯೋಗೇಶ್ಗೆ ಪೊಲೀಸ್ ಕೆಲಸ ಸಿಕ್ಕಿದೆ. ಕೆಲಸ ಸಿಗುತ್ತಿದಂತೆ ಯೋಗೇಶ್ ತನ್ನ ವರಸೆ ಬದಲಾಯಿಸಿದ್ದಾನೆ. ಮದುವೆಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾನೆ. ಇದರಿಂದ ಮನನೊಂದ ನಂದಿನಿ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ. ಈ ಸಂಬಂಧ ಯಳಂದೂರು ಪೊಲೀಸ್ ಠಾಣೆಯಲ್ಲಿ ನಂದಿನಿ ಪೋಷಕರು ದೂರು ದಾಖಲಿಸಿದ್ದಾರೆ.