ನ್ಯೂಸ್

ವ್ಯಸನ ಮುಕ್ತನನ್ನಾಗಿ ಮಾಡಿ ಎಂದು ಹೋದವನ ಬದುಕನ್ನು ಶಾಶ್ವತವಾಗಿ ಮುಗಿಸಿಬಿಡೋದಾ?....

sspmiracle1982

ಪಟಿಯಾಲ:ಇಲ್ಲಿಯ ವ್ಯಸನ ಮುಕ್ತ ಕೇಂದ್ರದಲ್ಲಿ ಮದ್ಯ ವ್ಯಸನಿಯೊಬ್ಬ ಸಾವಿಗೀಡಾಗಿದ್ದಾನೆ.

ಆಸ್ಪತ್ರೆಯ ಸಿಬ್ಬಂದಿಯಿಂದ ಹಲ್ಲೆಗೊಳಗಾಗಿ ಆತ ಮೃತಪಟ್ಟಿದ್ದಾನೆ ಎಂದು ಮೃತ ವ್ಯಕ್ತಿಯ ಕುಟುಂಬದವರು ಆರೋಪಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಆತ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿಯನ್ನು ದೀಪಕ್ ಕುಮಾರ್ ಎಂದು ಗುರುತಿಸಲಾಗಿದೆ. ಕುಮಾರ್ ಮದ್ಯ ವ್ಯಸನಿಯಾಗಿದ್ದು,  ಸುಮಾರು 5 ದಿನಗಳ ಹಿಂದೆ ಆತನನ್ನು ರಘೋಮಜ್ರದಲ್ಲಿರುವ ವ್ಯಸನ ಮುಕ್ತ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು.

ಆತನನ್ನು ಆಸ್ಪತ್ರೆಯ ಅಧಿಕಾರಿಗಳು ಕ್ರೂರವಾಗಿ ಥಳಿಸಿದ್ದಾರೆ ಮತ್ತು ಅವನ ದೇಹದ ಮೇಲೆ ಗಾಯದ ಗುರುತುಗಳಿವೆ ಎಂದು ಕುಮಾರ್ ನ ಸಹೋದರ ಬಲ್ರಾಮ್ ಹೇಳಿದ್ದಾರೆ.

ಘಟನೆಯ ದಿನದಂದು ಕುಮಾರ್ ನ ಆರೋಗ್ಯ ಸುಧಾರಿಸುತ್ತಿಲ್ಲ ಮತ್ತು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ಅಲ್ಲಿಯ ಸಿಬ್ಬಂದಿ ತಿಳಿಸಿದ್ದಾಗಿ ಬಲರಾಮ್ ಹೇಳಿದ್ದಾರೆ. ಬಲರಾಮ್ ಆಸ್ಪತ್ರೆ ತಲುಪುವ ಹೊತ್ತಿಗೆ ಸಿಬ್ಬಂದಿ ಹೊರಟು ಹೋಗಿದ್ದರು ಅವರು ಕುಮಾರ್ ನ ದೇಹವನ್ನು ತಮ್ಮ ಕಾರಿನೊಳಗೆ ಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ದೀಪಕ್, ಹೆಂಡತಿ ಮತ್ತು ಮೂವರು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಬಂದ ನಂತರ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಡಿಎಸ್ಪಿ ಸೌರವ್ ಜಿಂದಾಲ್ ತಿಳಿಸಿದ್ದಾರೆ.