ನ್ಯೂಸ್

ಪ್ರೀತಿಗಾಗಿ ಭಾರತದಿಂದ ಸ್ವೀಡನ್‌ಗೆ 5 ತಿಂಗಳುಗಳ ಕಾಲ ಸೈಕಲ್​ ಪ್ರಯಾಣ ಮಾಡಿದ

ನವದೆಹಲಿ: ಪ್ರೀತಿಗಾಗಿ ಹೆತ್ತವರು, ಸಮಾಜ, ಜಾತಿ, ಧರ್ಮವನ್ನು ಎದರು ಹಾಕಿಕೊಂಡು ಮದುವೆಯಾಗಿರುವ ಎಷ್ಟೋ ಉದಾಹರಣೆಗಳಿವೆ. ಪ್ರೀತಿಯೇ ಜಗತ್ತು ಎಂದು ನಂಬಿರುವವರು ಎನನ್ನು ಮಾಡಲು ಸಿದ್ಧರಾಗಿರುತ್ತಾರೆ. ವ್ಯಕ್ತಿಯೊಬ್ಬ ಪ್ರೀತಿಗಾಗಿ ಭಾರತದಿಂದ ಸ್ವೀಡನ್‌ಗೆ ಸೈಕಲ್‌ನಲ್ಲಿ ಪ್ರಯಾಣಿಸಿದ್ದಾರೆ.

ಭಾರತೀಯ ಕಲಾವಿದ ಪ್ರದ್ಯುಮ್ನ ಕುಮಾರ್ ಮಹಾನಂದಿಯಾ ಸ್ವೀಡಿಷ್ ಮಹಿಳೆ ಚಾರ್ಲೆಟ್ ಅವರನ್ನು ಪ್ರೀತಿಸುತ್ತಿದ್ದರು. ಅವಳೊಂದಿಗೆ ಒಂದಾಗಲು ಭಾರತದಿಂದ ಸ್ವೀಡನ್‌ಗೆ ಪ್ರಯಾಣಿಸಿದ್ದಾರೆ. ಇದೀಗ ಅವರ ಕಥೆ ಮತ್ತೆ ವೈರಲ್ ಆಗಿದೆ.

1975ರಲ್ಲಿ ಭಾರತೀಯ ಕಲಾವಿದರಾದ ಪ್ರದ್ಯುಮ್ನರ ಚಿತ್ರಕಲೆಗೆ ಸ್ವಿಡನ್​ನ 19ರ ಯುವತಿ ಚಾರ್ಲೆಟ್ ಮನಸೋತಿದ್ದರು. ಆಗ ಆ ಕಲಾವಿದರನ್ನು ಭೇಟಿಯಾಗಲೇಬೇಕು ಎಂಬ ಹಂಬಲ ಆಕೆಯಲ್ಲಿ ಹೆಚ್ಚಿತು. ತಡಮಾಡದೆ ಆಕೆ 22 ದಿನಗಳ ಕಾಲ ವ್ಯಾನ್​ನಲ್ಲಿ ಪ್ರಯಾಣಿಸಿ ಭಾರತ ತಲುಪಿದರು. ನಂತರ ಪೋರ್ಟ್ರೇಟ್​ ಚಿತ್ರಿಸುತ್ತಿರುವ ದಿನಗಳಲ್ಲೇ ಆಕೆಯ ಚೆಲುವು ಪ್ರದ್ಯುಮ್ನ ಅವರನ್ನು ಗಾಢವಾಗಿ ಸೆಳೆಯಿತು, ಪರಸ್ಪರ ಪ್ರೀತಿಯೂ ಬೆಳೆಯಿತು. ತಡಮಾಡದೆ ಅವರಿಬ್ಬರೂ ಮದುವೆಯಾದರು. ಆದರೆ ಚಾರ್ಲೆಟ್​ ಒಬ್ಬಳೇ ಮರಳಿ ಸ್ವೀಡನ್​ಗೆ ಪ್ರಯಾಣಿಸಬೇಕಾದ ಸಂದರ್ಭ ಸೃಷ್ಟಿಯಾಯಿತು.

ನಂತರ ಪ್ರದ್ಯುಮ್ನ ಅವರು 1977ರ ಜನವರಿಯಂದು ತನ್ನೆಲ್ಲಾ ಆಸ್ತಿಯನ್ನು ಮಾರಿ ಒಂದು ಸೈಕಲ್​ ಕೊಂಡುಕೊಂಡರು. ಭಾರತದಿಂದ ಸ್ವಿಡನ್​​ಗೆ ಸೈಕಲ್​ ಪ್ರಯಾಣದ ಮೂಲಕ ಹೆಂಡತಿ ಚಾರ್ಲೆಟ್​ಅನ್ನು ತಲುಪಿದರು.

ದಿನಕ್ಕೆ 70 ಕಿ.ಮೀ ಪ್ರಯಾಣಿಸುತ್ತಿದ್ದ ಪ್ರದ್ಯುಮ್ನ ಸ್ವೀಡನ್​ ತಲುಪಲು ನಾಲ್ಕು ತಿಂಗಳುಗಳ ಮೇಲೆ 3 ವಾರಗಳನ್ನು ತೆಗೆದುಕೊಂಡರು. ನಂತರ ಅವರು ಇಬ್ಬರು ಮಕ್ಕಳ ತಂದೆ-ತಾಯಿಯಾದರು. ಎಲ್ಲರೂ ಒಟ್ಟಿಗೇ ವಾಸಿಸತೊಡಗಿದರು.ಇದೇ ಶುದ್ಧ ಪ್ರೀತಿ ಎಂದು ಅನೇಕರು ಸೋಶಿಯಲ್​​ ಮೀಡಿಯಾದಲ್ಲಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.