ನ್ಯೂಸ್

ಪತ್ನಿಯಿಂದ ಚಿತ್ರಹಿಂಸೆ! ಪೊಲೀಸ್ ಅಧಿಕಾರಿಯ ಮನೆ ಬಾಗಿಲಲ್ಲಿ ಪ್ರಾಣಬಿಟ್ಟ ಪತಿ

ಉತ್ತರಪ್ರದೇಶ: ತನ್ನ ಪತ್ನಿಯ ವಿರುದ್ಧ ಪೊಲೀಸರು ಕಿರುಕುಳದ ಪ್ರಕರಣವನ್ನು ದಾಖಲಿಸಲಿಲ್ಲ ಎಂದು ಬೇಸತ್ತ ವ್ಯಕ್ತಿಯೊಬ್ಬ, ಪೊಲೀಸ್ ವರಿಷ್ಠಾಧಿಕಾರಿ ನಿವಾಸದ ಹೊರಗೆ ವಿಷ ಸೇವಿಸಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ವರದಿಯಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಆತನ ಮೇಲೆ ಕೌಟುಂಬಿಕ ದೌರ್ಜನ್ಯದ ಬಗ್ಗೆ ಪತ್ನಿ ದೂರು ನೀಡಿದ್ದಾಳೆ ಎಂದ ವ್ಯಕ್ತಿಯ ಕುಟುಂಬ ಸದಸ್ಯರು, ಹೆಂಡತಿ ಕೊಟ್ಟ ದೂರನ್ನು ಸ್ವೀಕರಿಸಿದ ಪೊಲೀಸರು, ಪತಿ ನೀಡಿದ ದೂರನ್ನು ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ. ಎರಡು ತಿಂಗಳ ಹಿಂದೆ ಪ್ರದೀಪ್ ಮತ್ತು ಇಶಾ ವಿವಾಹವಾಗಿದ್ದು, ಪ್ರದೀಪ್ ಅವರಿಂದ ಇಶಾ 5 ಲಕ್ಷ ರೂ.ಗೆ ಬೇಡಿಕೆಯಿಟ್ಟು, ಇದೇ ವಿಚಾರವಾಗಿ ಪದೇ ಪದೇ ಕಿರುಕುಳ ನೀಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶನಿವಾರ (ಫೆ.10) ಬೆಳಗ್ಗೆ ಪ್ರದೀಪ್ ತನ್ನ ಪತ್ನಿ ವಿರುದ್ಧ ದೂರು ನೀಡಲು ಎಸ್‌ಪಿ ಕಚೇರಿಗೆ ಹೋದರೂ ಅಧಿಕಾರಿ ಹಾಜರಿರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಹೀಗಾಗಿ ಪ್ರದೀಪ್ ನೇರವಾಗಿ ಎಸ್ಪಿ ನಿವಾಸಕ್ಕೆ ತೆರಳಿ ವಿಷ ಸೇವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಗ್ಗೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅತುಲ್ ಶರ್ಮಾ, "ಸುಂಗರ್ಹಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಪ್ರದೀಪ್ ವಿಷ ಸೇವಿಸಿದರು. ಅವರನ್ನು ಸಿಬ್ಬಂದಿಗಳು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ದಾರಿ ಮಧ್ಯೆಯೇ ಅವರು  ಮೃತಪಟ್ಟಿರುವುದು ಧೃಡವಾಗಿದೆ. ಈ ವಿಷಯವನ್ನು ಸದ್ಯ ಪರಿಶೀಲಿಸಲಾಗುತ್ತಿದೆ" ಎಂದರು.

ವ್ಯಕ್ತಿಯ ಕುಟುಂಬದ ಸದಸ್ಯರು ದೂರು ನೀಡಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).