More

    ತಮಿಳುನಾಡಿಗೆ ಸ್ಪಿನ್ ಕಡಿವಾಣ: ಇನಿಂಗ್ಸ್ ಮುನ್ನಡೆಗೆ ಮಯಾಂಕ್ ಪಡೆ ಹೋರಾಟ

    ಚೆನ್ನೈ: ಯುವ ಆಲ್ರೌಂಡರ್ ಹಾರ್ದಿಕ್ ರಾಜ್ (51 ರನ್, 96 ಎಸೆತ, 8 ಬೌಂಡರಿ ಹಾಗೂ 47ಕ್ಕೆ 2 ವಿಕೆಟ್) ಹಾಗೂ ಶಶಿಕುಮಾರ್ ಕೆ. (41ಕ್ಕೆ 3) ಸ್ಪಿನ್ ದಾಳಿಯ ಬಲದಿಂದ ಪ್ರವಾಸಿ ಕರ್ನಾಟಕ ತಂಡ ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಮಹತ್ವದ ಕಾದಾಟದಲ್ಲಿ ಆತಿಥೇಯ ತಮಿಳುನಾಡು ಎದುರು ಮೇಲುಗೈ ಸಾಧಿಸಿದ್ದು, ಇನಿಂಗ್ಸ್ ಮುನ್ನಡೆಯ ನಿರೀಕ್ಷೆಯಲ್ಲಿದೆ.

    ಚೆಪಾಕ್ ಆಂಗಣದಲ್ಲಿ ನಡೆಯುತ್ತಿರುವ ಸಿ ಗುಂಪಿನ ಪಂದ್ಯದ 2ನೇ ದಿನವಾದ ಶನಿವಾರ 5 ವಿಕೆಟ್‌ಗೆ 288 ರನ್‌ಗಳಿಂದ ಆಟ ಮುಂದುವರಿಸಿದ ಕರ್ನಾಟಕ, 119.4 ಓವರ್‌ಗಳಲ್ಲಿ 366 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ತಮಿಳುನಾಡು ದಿನದಂತ್ಯಕ್ಕೆ 7 ವಿಕೆಟ್‌ಗೆ 129 ರನ್‌ಗಳಿಸಿದ್ದು, ಇನ್ನೂ 237 ರನ್ ಹಿನ್ನಡೆಯಲ್ಲಿದೆ. ಬಾಬಾ ಇಂದ್ರಜಿತ್ (35*) ಜತೆ ಎಂ. ಮೊಹಮದ್ (3*) ಕ್ರೀಸ್‌ನಲ್ಲಿದ್ದಾರೆ.

    ಕರ್ನಾಟಕ: 119.4 ಓವರ್‌ಗಳಲ್ಲಿ 366 (ಪಡಿಕ್ಕಲ್ 151, ಹಾರ್ದಿಕ್ ರಾಜ್ 51, ಎಸ್.ಶರತ್ 45, ಶಶಿಕುಮಾರ್ 9, ಅಜಿತ್ ರಾಮ್ 75ಕ್ಕೆ 4, ಸಾಯಿ ಕಿಶೋರ್ 102ಕ್ಕೆ 3). ತಮಿಳುನಾಡು: 7 ವಿಕೆಟ್‌ಗೆ 129 (ಎನ್.ಜಗದೀಶನ್ 40, ಇಂದ್ರಜೀತ್ 35*, ವಿಜಯ್ ಶಂಕರ್ 6, ಸಾಯಿ ಕಿಶೋರ್ 2, ಮೊಹಮದ್ 3*, ಶಶಿಕುಮಾರ್ ಕೆ.41ಕ್ಕೆ 3, ಹಾರ್ದಿಕ್ ರಾಜ್ 47ಕ್ಕೆ2).

    ಹಾರ್ದಿಕ್-ಶರತ್ ಆಸರೆ: ಬೆಳಗ್ಗೆ ದೇವದತ್ ಪಡಿಕ್ಕಲ್ (151) ದಿನದ ಮೊದಲ ಓವರ್‌ನಲ್ಲೇ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಬಳಿಕ 6ನೇ ವಿಕೆಟ್‌ಗೆ ಹಾರ್ದಿಕ್ ರಾಜ್‌ಗೆ ಜತೆಯಾದ ವಿಕೆಟ್ ಕೀಪರ್-ಬ್ಯಾಟರ್ ಶರತ್ ಶ್ರೀನಿವಾಸ್ (45) ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ಇವರಿಬ್ಬರು 41 ಸೇರಿಸಿದರು. ಹಾರ್ದಿಕ್ ರಣಜಿಯಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದರು. 9ನೇ ವಿಕೆಟ್‌ಗೆ ಶರತ್ ಹಾಗೂ ಶಶಿಕುಮಾರ್ (9) 32 ರನ್ ಸೇರಿಸಿ ಗೌರವಯುತ ಮೊತ್ತ ಕಲೆಹಾಕಲು ನೆರವಾದರು.

    ಆತಿಥೇಯರಿಗೆ ಸ್ಪಿನ್ ಪೆಟ್ಟು: ತಮಿಳುನಾಡು ತವರಿನಲ್ಲಿ ಉತ್ತಮ ಆರಂಭದ ಬಳಿಕ ಸ್ಪಿನ್ ಪೆಟ್ಟು ತಿಂದಿತು. ವಿಮಲ್ (14) ಹಾಗೂ ಎನ್. ಜಗದೀಶನ್ (40) ಮೊದಲ ವಿಕೆಟ್‌ಗೆ 51 ರನ್ ಸೇರಿಸಿದರು. ಹಾರ್ದಿಕ್ ರಾಜ್ ಕರ್ನಾಟಕಕ್ಕೆ ಮೊದಲ ಯಶಸ್ಸು ತಂದರು. ಬಳಿಕ ಶಶಿಕುಮಾರ್ ಹಾಗೂ ಹಾರ್ದಿಕ್ ರಾಜ್ ಯುವ ಸ್ಪಿನ್ ಜೋಡಿ ಎದುರು ತಮಿಳುನಾಡು ನಿರಂತರ ವಿಕೆಟ್ ಕಳೆದುಕೊಂಡಿತು. ಎಸ್. ಲೋಕೇಶ್ವರ್ (3), ವಿಜಯ್ ಶಂಕರ್ (6) ಬೇಗನೆ ಪೆವಿಲಿಯನ್ ಸೇರಿದರು. ಅನುಭವಿ ಬಾಬಾ ಇಂದ್ರಜಿತ್ ತಾಳ್ಮೆಯ ಬ್ಯಾಟಿಂಗ್ ನಡೆಸಿ ರಾಜ್ಯಕ್ಕೆ ಪ್ರತಿರೋಧ ತೋರಿದ್ದು, 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts