ನ್ಯೂಸ್

ನಗರಸಭೆ ಸದಸ್ಯನ ಕಿರುಕುಳಕ್ಕೆ ವ್ಯಕ್ತಿ ಬಲಿ?; ವಾಟ್ಸ್​ಆ್ಯಪ್​ನಲ್ಲಿ ವಿಡಿಯೋ ಸ್ಟೇಟಸ್​ ಹಾಕಿ ನೇಣು ಹಾಕಿಕೊಂಡ..

ಚಿಕ್ಕಬಳ್ಳಾಪುರ: ನಗರಸಭೆ ಸದಸ್ಯರೊಬ್ಬರ ವಿರುದ್ಧ ಕಿರುಕುಳ ಆರೋಪ ಹೊರಿಸಿದ ವ್ಯಕ್ತಿಯೊಬ್ಬ ವಾಟ್ಸ್​ಆ್ಯಪ್​ನಲ್ಲಿ ವಿಡಿಯೋ ಸ್ಟೇಟಸ್​ ಹಾಕಿ ನೇಣು ಹಾಕಿಕೊಂಡಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಆತ್ಮಹತ್ಯೆ ಪ್ರಕರಣ ನಡೆದಿದೆ.

ಚಿಕ್ಕಬಳ್ಳಾಪುರ ನಗರದ 15ನೇ ವಾರ್ಡ್​ನಲ್ಲಿ ಈ ಘಟನೆ ನಡೆದಿದೆ. ಬಾಡಿಗೆ ಮನೆಯಲ್ಲಿದ್ದ ಪ್ರಶಾಂತ್ (32) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಸಾವಿಗೆ ನಗರಸಭಾ ಸದಸ್ಯ ಅಂಬರೀಷ್​ ಕಿರುಕುಳವೇ ಕಾರಣ ಎಂದು ಈತ ಆರೋಪಿಸಿದ್ದಾನೆ.

ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿಕೊಂಡಿರುವ ಈತ, ತನ್ನ ಸಾವಿಗೆ ನಗರಸಭಾ ಸದಸ್ಯ ಅಂಬರೀಷ್ ಕಿರುಕುಳ ಕಾರಣವೆಂದು ಆರೋಪಿಸಿದ್ದಾನೆ. ಬಳಿಕ ಆ ವಿಡಿಯೋ ವಾಟ್ಸ್​ಆ್ಯಪ್ ಸ್ಟೇಟಸ್​ಗೆ ಹಾಕಿಕೊಂಡು ನೇಣು ಹಾಕಿಕೊಂಡಿದ್ದಾನೆ.

ಈ ಆತ್ಮಹತ್ಯೆ ಬಳಿಕ ನಗರಸಭಾ ಸದಸ್ಯ ಅಂಬರೀಷ್​ ಪೊಲೀಸರಿಗೆ ಶರಣಾಗಿದ್ದಾನೆ. ಚಿಕ್ಕಬಳ್ಳಾಪುರ ಡಿವೈಎಸ್​ಪಿ ವಾಸುದೇವ್ ಅವರ ಮುಂದೆ ಹಾಜರಾಗುವ ಮೂಲಕ ಶರಣಾಗಿದ್ದಾನೆ. ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಶಾಂತ್ ಆತ್ಮಹತ್ಯೆಯಲ್ಲಿ ತನ್ನ ಪಾತ್ರವಿಲ್ಲ, ತಾನು ಬೆದರಿಕೆ ಹಾಕಿಲ್ಲ, ಯಾವುದೇ ತನಿಖೆಗೂ ಸಿದ್ಧ ಎಂದು ಅಂಬರೀಷ್ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.