Pahalgam Terrorist Attack : ಕಾಶ್ಮೀರದ ಪಹಲ್ಗಾಮ್ನ ಭಯೋತ್ಪಾದಕ ದಾಳಿಯಲ್ಲಿ ಗುಂಡೇಟಿಗೆ ಬಲಿಯಾದ ವ್ಯಕ್ತಿಯೊಬ್ಬನ ಸಾವಿಗೆ ಆತನ ಪತ್ನಿಯೇ ಕಾರಣ ಎಂದು ಆರೋಪಿಸಿ, ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಮತ್ತು ಆಧಾರರಹಿತ ಪೋಸ್ಟ್ ಹಂಚಿಕೊಂಡಿದ್ದಕ್ಕೆ ಮಧ್ಯಪ್ರದೇಶದ ಜಬಲ್ಪುರದ ಯುವಕನೊಬ್ಬನನ್ನು ಬಂಧಿಸಲಾಗಿದೆ.
ಬಂಧಿತನನ್ನು ಒಸಾಫ್ ಖಾನ್ ಎಂದು ಗುರುತಿಸಲಾಗಿದೆ. ಈತ ವೈದ್ಯಕೀಯ ವೃತ್ತಿ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ಹತ್ಯಾಕಾಂಡದಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದಾರೆ. ಭಯೋತ್ಪಾದಕರ ಗುಂಡೇಟಿಗೆ ಬಲಿಯಾದ ತನ್ನ ಗಂಡನ ಶವದ ಮುಂದೆಯೇ ಪತ್ನಿ ಮೌನವಾಗಿ ಕುಳಿತಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು.
ಇದೀಗ ಈ ಪೋಸ್ಟ್ ಅನ್ನು ಹಂಚಿಕೊಂಡಿರುವ ಒಸಾಫ್, ತನ್ನ ಗಂಡನನ್ನು ಕೊಲೆ ಮಾಡಲು ಆಕೆಯೇ ಶೂಟರ್ಗಳನ್ನು ನೇಮಿಸಿಕೊಂಡಿದ್ದಳು ಎಂದು ಆಧಾರರಹಿತ ಆರೋಪ ಮಾಡಿದ್ದ. ಈ ಮಹಿಳೆಯನ್ನು ತನಿಖೆ ಮಾಡಬೇಕು. ಬಹುಶಃ ಅವಳು ಶೂಟರ್ ಅನ್ನು ನೇಮಿಸಿಕೊಂಡು ಅವಕಾಶ ಸಿಕ್ಕ ಕ್ಷಣದಲ್ಲೇ ತನ್ನ ಗಂಡನನ್ನು ಕೊಲ್ಲುವಂತೆ ಮಾಡಿರಬಹುದು ಎಂದು ಒಸಾಫ್ ಖಾನ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದು, ತಕ್ಷಣ ವೈರಲ್ ಆಗಿ, ವ್ಯಾಪಕ ಖಂಡನೆಗೆ ಗುರಿಯಾಯಿತು.
ದಾಳಿ ನಡೆಯುವ ಒಂದು ವಾರಕ್ಕೂ ಮುಂಚೆಯೇ ಆ ಮಹಿಳೆ ಮದುವೆಯಾಗಿದ್ದರು. ಘಟನೆ ನಡೆದ ಕೆಲ ಸಮಯದ ಬಳಿಕ ವಿಡಿಯೋ ಹೇಳಿಕೆ ನೀಡಿರುವ ಮಹಿಳೆ, ತಾವು ಎದುರಿಸಿದ ಆಘಾತವನ್ನು ವಿವರಿಸಿದರು. ನಾವು ಭೇಲ್ಪುರಿ ತಿನ್ನುತ್ತಿದ್ದೆವು, ಬಂದೂಕುಧಾರಿಯೊಬ್ಬ ನನ್ನ ಪತಿಯನ್ನು ನೀನು ಮುಸ್ಲಿಮಾ ಎಂದು ಕೇಳಿ, ಮುಸ್ಲಿಂ ಅಲ್ಲ ಎಂದು ಗೊತ್ತಾದ ಬಳಿಕ ಗುಂಡು ಹಾರಿಸಿದನು ಎಂದು ಮಹಿಳೆ ಕಣ್ಣೀರಿಡುತ್ತಾ ಹೇಳಿದರು.
ಇನ್ನು ಒಸಾಫ್ ಖಾನ್ ಅವರು ಮಾಡಿದ ಪೋಸ್ಟ್‌ನಿಂದ ಕೋಪಗೊಂಡ ಸ್ಥಳೀಯ ನಿವಾಸಿ ಅಭಯ್ ಶ್ರೀವಾಸ್ತವ್, ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದು, ಇದೀಗ ಅಸಾಫ್ ಖಾನ್ನನ್ನು ಬಂಧಿಸಲಾಗಿದೆ.
ಪಹಲ್ಗಾಮ್ ಬಳಿಯ ಬೈಸರನ್ ಹುಲ್ಲುಗಾವಲುಗಳಲ್ಲಿ ಐದರಿಂದ ಆರು ಬಂದೂಕುಧಾರಿಗಳು ನಡೆಸಿದ ಈ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವಿಗೀಡಾಗಿದ್ದಾರೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾದ ಒಂದು ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಈ ಹತ್ಯಾಕಾಂಡದ ಹೊಣೆಯನ್ನು ಹೊತ್ತುಕೊಂಡಿದೆ. (ಏಜೆನ್ಸೀಸ್)