ನ್ಯೂಸ್

ಗೆಳೆಯನಿಗೋಸ್ಕರ ಹುಡುಗಿಯಾದ ಹುಡುಗ: ಈ ವಿಚಿತ್ರ ಪ್ರೇಮ ಪ್ರಕರಣದಲ್ಲೀಗ ಅನಿರೀಕ್ಷಿತ ಟ್ವಿಸ್ಟ್..

ವಿಜಯವಾಡ: ಗೆಳೆಯನಿಗೊಸ್ಕರ ಲಿಂಗ ಬದಲಾವಣೆ ಮಾಡಿಕೊಂಡನಿಗೆ ಯುವಕನೊಬ್ಬ ಮೋಸಮಾಡಿ ಪರಾರಿಯಾಗಿರುವ ವಿಚಿತ್ರ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದ್ದು, ಇಬ್ಬರ ನಡುವಿನ ಪ್ರೇಮಕಥೆ ಸಂಚಲನ ಮೂಡಿಸಿದೆ.

ಕೃಷ್ಣ ಜಿಲ್ಲೆಯ ಪವನ್ ಹಾಗೂ ವಿಜಯವಾಡದ ಕೃಷ್ಣಲಂಕಾದ ನಾಗೇಶ್ವರ ರಾವ್ ಎಂಬಾತ 2019ರಲ್ಲಿ ಒಂದೇ ಕಾಲೇಜಿನಲ್ಲಿ ಬಿಇಡಿ ಮುಗಿಸಿದ್ದು, ಇಬ್ಬರೂ ಇಲ್ಲಿ ಓದುತ್ತಿರುವಾಗಲೇ ಕೃಷ್ಣಾಲಂಕಾದ ಸತ್ಯಂಗಾರಿ ಹೋಟೆಲ್ ಬಳಿ ಟ್ಯೂಷನ್ ಸೆಂಟರ್ ಆರಂಭಿಸಿ ಒಂದೇ ಮನೆಯಲ್ಲಿಯ ವಾಸವಾಗಿದ್ದರು. ಪವನ್​ಗೆ ಹುಡುಗಿಯ ಲಕ್ಷಣಗಳಿದ್ದ ಕಾರಣ ಆತನ ಮೇಲೆ ನಾಗೇಶ್ವರ್​ ರಾವ್​ಗೆ ಪ್ರೀತಿ ಮೂಡಿದ್ದು ಸ್ನೇಹಿತನ ಮುಂದೆ ಹೇಳಿಕೊಂಡಿದ್ದ.

ಇದನ್ನೂ ಓದಿ: ಚಿತ್ರಮಂದಿರದ ಮುಂದೆ ನಿಂತಿದ್ದ ಯುವಕ ಎಲ್ಲರ ಕಣ್ಮುಂದೆಯೇ ಕಿಡ್ನ್ಯಾಪ್​..

ಹೀಗೆ ಇಬ್ಬರ ನಡುವೆ ಪ್ರೀತಿ ಅರಳಿ ಇಬ್ಬರೂ ವರ್ಷಗಟ್ಟಲೆ ಪ್ರೀತಿಸುತ್ತಿದ್ದರು, ಅಲ್ಲದೇ ಇಬ್ಬರೂ ಮದುವೆಯಾಗಲು ಬಯಸಿದ್ದರು. ಈ ನಡುವೆ ನಾಲ್ಕು ತಿಂಗಳ ಹಿಂದೆ ದೆಹಲಿಯಲ್ಲಿ ಪವನ್ ವೆಜಿನೋಪ್ಲಾಸ್ಟಿ ಸರ್ಜರಿ ಮೂಲಕ ಹುಡುಗಿಯಾಗಿ ಪವನ್ ತನ್ನ ಹೆಸರನ್ನು ಭ್ರಮರಾಂಬ ಎಂದು ಬದಲಾಯಿಸಿಕೊಂಡಿದ್ದ, ಈ ಶಸ್ತ್ರಚಿಕಿತ್ಸೆಗೆ ಸುಮಾರು 11 ಲಕ್ಷ ರೂ. ಕೂಡ ಖರ್ಚಾಗಿತ್ತು. ಬಳಿಕ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದು ಈ ನಡುವೆ ಇಬ್ಬರ ನಡುವೆ ಕೆಲಕಾಲ ಭಿನ್ನಾಭಿಪ್ರಾಯ ಶುರುವಾಗಿ ಮನಸ್ತಾಪ ಉಂಟಾಗಿತ್ತು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ನಾಗೇಶ್ವರ ಆಕೆಯನ್ನು ಮದುವೆಯಾಗಲು ನಿರಾಕರಿಸಿ ಮನೆಯಿಂದ ಹೊರಗೆ ಹಾಕಿ ತಾಯಿ ವಿಜಯಲಕ್ಷ್ಮಿ ಜತೆ ಮಂಗಳಗಿರಿಗೆ ತೆರಳಿದ್ದನು. ಇದಾದ ನಂತರ ಭ್ರಮರಾಂಬಾ ಪೆನಮಲೂರಿನಲ್ಲಿರುವ ತನ್ನ ಪೋಷಕರ ಬಳಿಗೆ ಹೋಗಿದ್ದು, ಇತ್ತೀಚೆಗೆ ನಾಗೇಶ್ವರನ ವಿರುದ್ಧ ದೂರು ನೀಡಲು ಮಂಗಳಗಿರಿ ಪೊಲೀಸರನ್ನು ಸಂಪರ್ಕಿಸಿದ್ದು ಅವರ ಸೂಚನೆ ಮೇರೆಗೆ ಕೃಷ್ಣಾಲಂಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಇದನ್ನೂ ಓದಿ: ಮಧುಮೇಹಕ್ಕೆ ಮದ್ದು ಈ ಹಣ್ಣು: ರೋಗಿಗಳಿಗೆ ನೀಡುವ ಅದ್ಭುತ ಪ್ರಯೋಜನಗಳು ಇಂತಿವೆ..

ಸಂತ್ರಸ್ತೆ ದೂರಿನ ಮೇರೆಗೆ ನಾಗೇಶ್ವರ ಹಾಗೂ ಆತನ ತಾಯಿ ವಿಜಯಲಕ್ಷ್ಮಿ ವಿರುದ್ಧ ಇದೇ ತಿಂಗಳ ಹತ್ತರಂದು ಪ್ರಕರಣ ದಾಖಲಿಸಿಕೊಂಡ ಪೋಲಿಸರು ಈ ಕುರಿತು ತನಿಖೆ ನಡೆಸುತ್ತಿದ್ದು, ಮದುವೆಯಾಗುವುದಾಗಿ ನಂಬಿಸಿ 11 ಸವರ ಚಿನ್ನ ಹಾಗೂ 26 ಲಕ್ಷ ರೂ.ಗಳನ್ನು ನಾಗೇಶ್ವರನಿಗೆ ಭ್ರಮರಾಂಬ ನೀಡಿದ್ದಳು ಎಂದು ಆರೋಪಿಸಲಾಗಿದೆ. ಸದ್ಯ, ನಾಗೇಶ್ವರ ರಾವ್ ತಲೆಮರೆಸಿಕೊಂಡಿದ್ದು, ಈ ಘಟನೆ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ.(ಏಜೆನ್ಸೀಸ್​)