ಅಹಮದಾಬಾದ್: ಹಾಡಹಗಲೇ ಪತ್ನಿಯನ್ನು ಬರ್ಬರವಾಗಿ ಕೊಲೆಗೈದು ಆಕೆಯ ಶವವನ್ನು ಸ್ಕೂಟರ್ ಮೇಲಿಟ್ಟುಕೊಂಡು ಸುಮಾರು 10 ಕಿ.ಮೀ ವರೆಗೆ ಸವಾರಿ ಮಾಡಿದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ.
ಘಟನೆಯು ಗುಜರಾತಿನ ಪಲಿಟನಾ ಪಟ್ಟಣದ ಬಳಿಯಿರುವ ಗ್ರಾಮದ ಬಳಿ ಕಳೆದ ಭಾನುವಾರ ನಡೆದಿದೆ. ಆರೋಪಿ ಅಮಿತ್ ಹೆಮ್ನಾನಿ ಪತ್ನಿಯ ಶವವನ್ನು ಸ್ಕೂಟರ್ನಲ್ಲಿಟ್ಟುಕೊಂಡು ಹೋಗುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಬಂಧಿಸಲು ನೆರವಾಗಿದ್ದಾರೆ.
ಅಮಿತ್ ವರ್ಷದ ಹಿಂದಷ್ಟೇ ನೈನಾ ಎಂಬಾಕೆಯನ್ನು ಮದುವೆಯಾಗಿದ್ದ. ಕ್ಲುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ತಾರಕಕ್ಕೇರಿಸಿದ ಗಲಾಟೆಯಿಂದ ನಿಯಂತ್ರಣ ಕಳೆದುಕೊಂಡು ಅಮಿತ್, ಪತ್ನಿಯನ್ನು ಉಸಿರುಗಟ್ಟಿಸಿ ಕೊಂದು ಶವವನ್ನು ಸ್ಕೂಟರ್ನಲ್ಲಿ ಹಾಕಿಕೊಂಡು ತೆರಳಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪತ್ನಿಯ ಶವವನ್ನು ಅರಣ್ಯ ಪ್ರದೇಶದ ಬಳಿ ಎಸೆದುಬರಲು ತೆಗೆದುಕೊಂಡು ಹೋಗುತ್ತಿದ್ದುದ್ದಾಗಿ ಆರೋಪಿ ಅಮಿತ್, ಪೊಲೀಸ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. (ಏಜೆನ್ಸೀಸ್)