ನ್ಯೂಸ್

ನೇಣಿಗೆ ಶರಣಾಗುವ ಮುನ್ನ ತಮ್ಮ ಮಾಡಿದ ಕೆಲಸದಿಂದಾಗಿ ಅಣ್ಣನ ಕುಟುಂಬವೇ ನಾಶ

ಭೋಪಾಲ್​: ಆಸ್ತಿ ಆಸೆ ಎಂತವರನ್ನೂ ಪಾಪಿಗಳನ್ನಾಗಿ ಮಾಡಿಬಿಡುತ್ತದೆ. ಅಣ್ಣ ತಮ್ಮಂದಿರ ಮಧ್ಯೆ ಜಗಳ ಹುಟ್ಟುವುದಕ್ಕೆ ಮುಖ್ಯ ಕಾರಣವೇ ಆಸ್ತಿ. ಈ ಆಸ್ತಿಯ ಕಾರಣದಿಂದಲೇ ಆತ್ಮಹತ್ಯೆಗೆ ಶರಣಾದ ತಮ್ಮನೊಬ್ಬ, ಸಾಯುವುದಕ್ಕೂ ಮುನ್ನ ಅಣ್ಣನ ಕುಟುಂಬವನ್ನೂ ಸಂಪೂರ್ಣವಾಗಿ ನಾಶ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ರಾಜ್ಯದ ಅನುಪ್ಪುರ ಜಿಲ್ಲೆಯಲ್ಲಿ ಓಂಕಾರ್​ ವಿಶ್ವಕರ್ಮ (35)ನ ಕುಟುಂಬ, ತಮ್ಮ ದೀಪಕ್​ ವಿಶ್ವಕರ್ಮನೊಂದಿಗೆ ಬದುಕುತ್ತಿತ್ತು. ಇತ್ತೀಚೆಗೆ ಅಣ್ಣ ತಮ್ಮನ ನಡುವೆ ಆಸ್ತಿಯ ವಿಚಾರದಲ್ಲಿ ಜಗಳವಾಗಿದೆ. ಓಂಕಾರ್​ ಸಿಟ್ಟಿನಿಂದ ತಮ್ಮನನ್ನು ಮನೆಯಿಂದ ಹೊರಗೆ ಹಾಕಿದ್ದನಂತೆ. ಅಣ್ಣ ಮನೆಯಿಂದ ಹೊರಗೆ ಹಾಕಿದ್ದಕ್ಕೆ ದ್ವೇಷ ಬೆಳೆಸಿಕೊಂಡ ದೀಪಕ್​ ಗುರುವಾರ ನೇಣಿಗೆ ಶರಣಾಗಿದ್ದಾನೆ.

ನೇಣಿಗೆ ಶರಣಾಗುವ ಮುನ್ನ ತನ್ನ ದ್ವೇಷವನ್ನು ದೀಪಕ್​ ತೀರಿಸಿಕೊಂಡಿದ್ದಾನೆ. ಬುಧವಾರ ರಾತ್ರಿ ಅಣ್ಣನ ಮನೆ ಬಳಿ ಹೋದ ದೀಪಕ್​, ಮನೆಗೆ ಬೆಂಕಿ ಹಚ್ಚಿದ್ದಾನೆ. ಬೆಂಕಿ ಅವಘಡದಿಂದಾಗಿ ಓಂಕಾರ್​, ಪತ್ನಿ ಕಸ್ತೂರಿಯಾ (31) ಮತ್ತು ನಾಲ್ಕು ವರ್ಷದ ಮಗ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳೀಯರ ಸಹಾಯದಿಂದಾಗಿ 17 ವರ್ಷದ ಮಗಳನ್ನು ಮಾತ್ರವೇ ಬದುಕುಳಿಸಿಕೊಳ್ಳಲಾಗಿದೆ. ಆಸ್ಪತ್ರೆ ಸೇರಿರುವ ಮಗಳ ಸ್ಥಿತಿಯೂ ಗಂಭೀರವಾಗಿರುವುದಾಗಿ ತಿಳಿಸಲಾಗಿದೆ.

ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)