ನ್ಯೂಸ್

ಕುರಾನ್​ಗೆ ಅವಮಾನ ಮಾಡಿದ ಆರೋಪ; ಪೊಲೀಸ್​ ಠಾಣೆಗೆ ನುಗ್ಗಿ ವ್ಯಕ್ತಿಯನ್ನು ಜೀವಂತವಾಗಿ ಸುಟ್ಟ ಜನ

ನವದೆಹಲಿ: ಕುರಾನ್​ಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಜನರ ಗುಂಪೊಂದು ವ್ಯಕ್ತಿಯೋರ್ವನನ್ನು ಜೀವಂತವಾಗಿ ಸುಟ್ಟು ಕೊಲೆ ಮಾಡಿರುವ ಘಟನೆ ಪಾಕಿಸ್ತಾನದ ಖೈಬರ್​ ಪಖ್ತುಂಖ್ವಾ ಪ್ರಾಂತ್ಯದ ಸ್ವಾಟ್​ ಜಿಲ್ಲೆಯಲ್ಲಿ ನಡಿದಿದೆ. ಜನರ ಗುಂಪು ವ್ಯಕ್ತಿಯನ್ನು ಥಳಿಸಿ ಆತನನ್ನು ಸುಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಮೃತ ವ್ಯಕ್ತಿಯು ಸಿಯಾಲ್​ಕೋಟ್​ನ ನಿವಾಸಿಯಾಗಿದ್ದು, ಈತ ಕುರಾನ್​ನ ಕೆಲವು ಪುಟಗಳನ್ನು ಹರಿದು ಸುಟ್ಟು ಹಾಕಿದ್ದ ಎಂಬ ಆರೋಪ ಕೇಳಿ ಬಂದಿದೆ. ಈ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಆತನನ್ನು ಪೊಲೀಸ್​ ಠಾಣೆಯ ಮುಂದೆಯೇ ಹತ್ಯೆ ಮಾಡಿ ಸುಡಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​​ ಅಧಿಕಾರಿ ಜಹಿದುಲ್ಲಾ, ಮೃತನು ಸಿಯಾಲ್​ಕೋಟ್​ ನಿವಾಸಿ ಎಂದು ತಿಳಿದು ಬಂದಿದ್ದು, ಈತ ಕುರಾನ್​ನ ಕೆಲವು ಪುಟಗಳನ್ನು ಹರಿದು ಬೆಂಕಿ ಹಚ್ಚಿದ್ದ ಎಂದು ತಿಳಿದು ಬಂದಿದೆ. ಖಚಿತ ಮಾಹಿತಿ ಆಧರಿಸಿ ನಾವು ಆತನನ್ನು ಬಂಧಿಸಿ ಠಾಣೆಯಲ್ಲಿ ಇರಿಸಿದ್ದೆವು. ಆತನ ಬಂಧನದ ಬೆನ್ನಲ್ಲೇ ಕುರಾನ್​ಗೆ ಅವಮಾನ ಮಾಡಲಾಗಿದೆ ಎಂಬ ಸುದ್ದಿ ಜನರಲ್ಲಿ ಹರಡಿದ ತಕ್ಷಣ ಅವರು ಪೊಲೀಸ್ ಠಾಣೆಗೆ ಆಗಮಿಸಿ ಸೆಲ್​ನಲ್ಲಿದ್ದ ವ್ಯಕ್ತಿಯನ್ನು ಎಳೆದುತಂದು ಹತ್ಯೆ ಮಾಡಿ ಬಳಿಕ ಆತನ ಶವಕ್ಕೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.

ಗುಂಪನ್ನು ಚದುರಿಸಲು ಅಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿ ಲಾಠಿ ಚಾರ್ಜ್​ ಮಾಡಿದ್ದಾರೆ. ಇದರ ಹೊರತಾಗಿಯೂ ಗುಂಪು ಪೊಲೀಸ್​​ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದು, ಠಾಣೆಯೊಳಗಿದ್ದ ವ್ಯಕ್ತಿಯನ್ನು ಹೊರಗೆ ಎಳೆತಂದು ಹತ್ಯೆ ಮಾಡಿ ಬೆಂಕಿ ಹಚ್ಚಿದ್ದಾರೆ. ಇದಲ್ಲದೆ ಜನರ ಗುಂಪು ಪೊಲೀಸ್​ ಠಾಣೆಗೆ ಬೆಂಕಿ ಹಚ್ಚಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆಯನ್ನು ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​​ ಅಧಿಕಾರಿ ಜಹಿದುಲ್ಲಾ ತಿಳಿಸಿದ್ದಾರೆ.