ನ್ಯೂಸ್

VIDEO| ಆಕಾಶದಲ್ಲಿ ತೇಲಿದ ಹಡಗು! ವೈರಲ್​ ವಿಡಿಯೋ ನೋಡಿದ್ರೆ ಅಚ್ಚರಿ ಖಂಡಿತ

ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವ ಹಾಗೂ ಗೊಂದಲ ಮೂಡಿಸುವ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರನ್ನು ಗೊಂದಲಕ್ಕೀಡುಮಾಡಿದೆ.

ದೊಡ್ಡ ಬೋಟ್​ ಒಂದು ಆಕಾಶದಲ್ಲಿ ತೇಲುತ್ತಿರುವಂತೆ ಕಾಣುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕೊಲಿನ್​ ಮ್ಯಾಕ್​ಕಲಮ್​ ಎಂಬಾತ ಈ ವಿಡಿಯೋವನ್ನು ಸ್ಕಾಟಿಷ್​ನ ಅಬರ್ಡೀನ್​ಶೈರ್​ ಕರಾವಳಿ ಪ್ರದೇಶದ ಬಳಿ ಹಾದುಹೋಗುವಾಗ ರೆಕಾರ್ಡ್​ ಮಾಡಿದ್ದಾನೆ. ವಿಡಿಯೋದಲ್ಲಿ ಕೆಂಪುಬಣ್ಣದ ಹಡಗು ದಿಗಂತದಲ್ಲಿ ತೇಲುತ್ತಿರುವಂತೆ ಕಾಣುತ್ತದೆ.

ಸಮುದ್ರ ಮತ್ತು ಆಕಾಶದ ಬಣ್ಣ ಒಂದೇ ಆಗಿರುವುದರಿಂದ ಹಡಗು ಮೋಡಗಳ ನಡುವೆ ತೇಲುತ್ತಿರುವಂತೆ ಭಾಸವಾಗುತ್ತದೆ. ಅಲ್ಲದೆ, ಹಡಗಿನ ಅಡಿಹಲಗೆ ಅಗೋಚರವಾಗಿದ್ದು, ತಗ್ಗು ಪ್ರದೇಶದ ಮೋಡಗಳೊಂದಿಗೆ ಹೊಂದಿಕೆಯಾಗುತ್ತಿದೆ. ಇದರೊಂದಿಗೆ ನೀರು ಎಲ್ಲಿ ಕೊನೆಗೊಳ್ಳುತ್ತದೆ ಮತ್ತು ಸ್ಪಷ್ಟವಾದ ನೀಲಿ ಆಕಾಶ ಎಲ್ಲಿ ಆರಂಭವಾಗುತ್ತವೆ ಎಂದು ಗುರುತಿಸಲು ಕಷ್ಟವಾಗುತ್ತಿದೆ.

ಅಬರ್ಡೀನ್​ಶೈರ್​ನ ತುರ್ರಿಫ್ಫ್​ ಮೂಲದ ಆರೋಗ್ಯ ಮತ್ತು ಸುರಕ್ಷತಾ ಕೆಲಸಗಾರ ವಿಡಿಯೋ ಕ್ಲಿಪ್​ ಮತ್ತು ಫೋಟೋವನ್ನು ತನ್ನ ಫೇಸ್​ಬುಕ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಬಾಂಫ್​ನಲ್ಲಿ ನಿಜ ಜೀವನದ ದೃಷ್ಟಿಭ್ರಮೆಯನ್ನು ನೋಡಿದೆ ಎಂದು ಅಡಿಬರಹ ಬರೆದುಕೊಂಡಿದ್ದಾರೆ.

ಫೋಟೋ ಮತ್ತು ವಿಡಿಯೋ ಸೆರೆಹಿಡಿದ ಕೊಲಿನ್​ ಸಹ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದು ಭಾರಿ ವೈರಲ್​ ಆಗಿದೆ. ಅನೇಕ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ನಿಜಕ್ಕೂ ಇದೊಂದು ಗಮನಾರ್ಹ ದೃಷ್ಟಿಭ್ರಮೆಯಾಗಿದೆ ಎಂದು ಉದ್ಘಾರ ತೆಗೆದಿದ್ದಾರೆ. (ಏಜೆನ್ಸೀಸ್​) (ವಿಡಿಯೋ ಕೃಪೆ: ಡೈಲಿ ಮಿರರ್​)