ನ್ಯೂಸ್

ಹೆಂಡತಿಯನ್ನು ಕೊಂದು, ಶವದ ಜತೆ ಮಲಗಿ, ಮಾರನೇ ದಿನ ಊರು ಬಿಟ್ಟ ಪತಿರಾಯ!

ಸೂರತ್​: ಜೀವನಪರ್ಯಂತ ಜತೆಯಿರುವುದಾಗಿ ಪ್ರಮಾಣ ಮಾಡಿ ಮದುವೆಯಾದ ಪತ್ನಿಯನ್ನೇ ಪತಿ ಕೊಂದು, ಶವದ ಜತೆ ಮಲಗಿದ ಘಟನೆ ಗುಜರಾತ್​ನಲ್ಲಿ ನಡೆದಿದೆ. ಪತ್ನಿಯನ್ನು ಕೊಂದ ಆತ ಮಾರನೇ ದಿನ ಏನೂ ಆಗೇ ಇಲ್ಲವೆನ್ನುವಂತೆ ಮನೆ ಬಿಟ್ಟು ತೆರಳಿದ್ದ ಎನ್ನಲಾಗಿದೆ.

ಕೇದ್ಬಾರಾಮದ ಲಿಖರಾಮ್ ಅಲಿಯಾಸ್ ಲಕ್ಷ್ಮಣ್ ಕೇಶರಾಮ್ ಚೌಧರಿ ಕೆಲ ವರ್ಷಗಳ ಹಿಂದೆ ಏಜೆಂಟ್​ ಒಬ್ಬರ ಮೂಲಕ ವಧು ಹುಡುಕಿ, ಮದುವೆಯಾಗಿದ್ದ. ಇದಕ್ಕೆಂದು ಆತ 3 ಲಕ್ಷ ರೂಪಾಯಿ ಖರ್ಚು ಮಾಡಿದ್ದನಂತೆ. ಆದರೆ ಮದುವೆಯಾದ ಮೇಲೆ ಆತನ ಬದುಕು ಅವನೆಂದುಕೊಂಡಂತಿರಲಿಲ್ಲ. ದಂಪತಿಯ ನಡುವೆ ಆಗಾಗ ಜಗಳವಾಗುತ್ತಿತ್ತು. ಇದರಿಂದ ಬೇಸತ್ತ ಲಿಖರಾಮ್​ ಡಿಸೆಂಬರ್​ 4ರಂದು ಪತ್ನಿಯನ್ನು ಕೊಂದಿದ್ದಾನೆ. ಆಕೆಯ ಶವವನ್ನು ಗೋನಿ ಚೀಲದೊಳಗೆ ತುಂಬಿದ್ದಾನೆ. ಪೂರ್ತಿ ರಾತ್ರಿ ಹೆಣದೊಂದಿಗೆ ಮಲಗಿ ಕಾಲ ಕಳೆದಿದ್ದಾನೆ.

ಎಂದಿನಂತೆ ಬೆಳಗ್ಗೆ ಎದ್ದ ಲಿಖರಾಮ್​ ಮನೆಯಿಂದ ಹೊರಟು ತನ್ನ ತರಕಾರಿ ಗಾಡಿಯನ್ನು ತಳ್ಳಿಕೊಂಡು ಹೊರಟಿದ್ದಾನೆ. ನಗರದಿಂದ 140 ಕಿ.ಮೀ ದೂರದಲ್ಲಿರುವ ಅಹಮದಾಬಾದ್​ವರೆಗೆ ಗಾಡಿಯನ್ನು ತಳ್ಳಿಕೊಂಡು ಹೋಗಿ ಅಲ್ಲಿ ಅದನ್ನು ಮಾರಾಟ ಮಾಡಿದ್ದಾನೆ. ನಂತರ ಬಸ್ ಒಂದರ ಮೂಲಕ ಸಬರ್​ಕಥಾಕ್ಕೆ ಹೊರಟಿದ್ದಾನೆ. ಅಷ್ಟರೊಳಗೆ ಪ್ರಕರಣವನ್ನು ಭೇದಿಸಿದ ಪೊಲೀಸರು ಲಿಖರಾಮ್​ಗಾಗಿ ಬಲೆ ಬೀಸಿದ್ದಾರೆ. ಇದೀಗ ಆತನನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)