ವಿಜಯವಾಡ: ಉತ್ತರ ಪ್ರದೇಶದಲ್ಲಿ 50 ವರ್ಷದ ಮಹಿಳೆಯ ಮೇಲೆ ಗ್ಯಾಂಗ್ ರೇಪ್ ಮಾಡಿ, ಭೀಕರವಾಗಿ ಕೊಲೆ ಮಾಡಿರುವ ಪ್ರಕರಣದ ಬೆನ್ನಲ್ಲೇ ದೇಶಾದ್ಯಂತ ಹಲವಾರು ಅತ್ಯಾಚಾರ ಪ್ರಕರಣಗಳು ಕೇಳಿ ಬರಲಾರಂಭಿಸಿವೆ. ಕೊಟ್ಟಿಗೆಯಲ್ಲಿ ಮಲಗಿದ್ದ 75 ವರ್ಷದ ವೃದ್ಧೆಯ ಮೇಲೆ 30 ವರ್ಷದ ಕಾಮುಕನೊಬ್ಬ ಅತ್ಯಾಚಾರವೆಸಗಿ, ವೃದ್ಧೆಯ ಕೊಲೆ ಮಾಡಿ ಆಕೆ ತೊಟ್ಟಿದ್ದ ಆಭರಣದೊಂದಿಗೆ ಪರಾರಿಯಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಚಿತ್ತೂರು ಜಿಲ್ಲೆಯ ತವನಂಪಲ್ಲೆ ತಾಲೂಕಿನ ಕೋತ್ಪಳ್ಳಿ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಕಳೆದ ಮಂಗಳವಾರದಂದು ವೃದ್ಧೆ ಅಲ್ಲಿದ್ದ ಕೊಟ್ಟಿಗೆಯಲ್ಲಿ ನಿದ್ರೆಗೆ ಜಾರಿದ್ದಳು. ಆ ಹೊತ್ತಿಗೆ ಕಂಠಪೂರ್ತಿ ಕುಡಿದು ಅಲ್ಲಿಗೆ ಬಂದ ಸುಧಾಕರ್ (30) ವೃದ್ಧೆಯನ್ನು ನೋಡಿದ್ದೇನೆ. ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಆಕೆ ಸಹಾಯಕ್ಕಾಗಿ ಕೂಗಲು ಆರಂಭಿಸಿದಳೆಂಬ ಸಿಟ್ಟಿಗೆ ಕೊಲೆ ಮಾಡಿದ್ದಾನೆ. ನಂತರ ಆಕೆಯ ಮೈ ಮೇಲಿದ್ದ ಒಡವೆಯನ್ನೆಲ್ಲ ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.
ಮರಣೋತ್ತರ ಪರೀಕ್ಷೆಯಲ್ಲಿ ವೃದ್ಧೆಯ ಮೇಲೆ ಅತ್ಯಾಚಾರವಾಗಿರುವುದು ದೃಢವಾಗಿದೆ. ಶುಕ್ರವಾರದಂದು ಸ್ಥಳೀಯ ಪೊಲೀಸರು ಆರೋಪಿ ಸುಧಾಕರನನ್ನು ಬಂಧಿಸಿದ್ದಾರೆ. ಈತನ ವಿರುದ್ಧ ಈಗಾಗಲೇ ಸಾಕಷ್ಟು ಪ್ರಕರಣಗಳು ದಾಖಲಾಗಿರುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್)