ನ್ಯೂಸ್

ರಶ್ಮಿಕಾ ಮಂದಣ್ಣ ಡೀಪ್​ಫೇಕ್​ ವಿಡಿಯೋ ಪ್ರಕರಣ; ಪ್ರಮುಖ ಆರೋಪಿ ಅರೆಸ್ಟ್

ನವದೆಹಲಿ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್​ ಫೇಕ್​ ವಿಡಿಯೋಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ವ್ಯಕ್ತಿಯೊಬ್ಬನನ್ನು ಆಂಧ್ರಪ್ರದೇಶದಲ್ಲಿ ಬಂಧಿಸಿದ್ದಾರೆ.

ಆರೋಪಿತ ವ್ಯಕ್ತಿಯ ಹೆಸರನ್ನು ಪೊಲೀಸರು ಈವರೆಗೆ ಬಹಿರಂಗಪಡಿಸಿಲ್ಲ. ಆರೋಪಿಯನ್ನು ಹೈದರಾಬಾದಿನಲ್ಲಿ ಬಂಧಿಸಿರುವ ಪೊಲೀಸರು ದೆಹಲಿಗೆ ಕರೆತರುತ್ತಿರುವುದಾಗಿ ತಿಳಿಸಿದ್ದಾರೆ.

ಕಳೆದ ವರ್ಷ ನವೆಂಬರ್​ ತಿಂಗಳಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್​ ಫೇಕ್​ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಈ ಬಗ್ಗೆ ನಟಿ ಸೇರಿದಂತೆ ಅನೇಕರು ಅಸಮಾಧಾನವನ್ನು ಹೊರಹಾಕಿದ್ದರು. ವಿದೇಶದಲ್ಲಿ ನೆಲೆಸಿರುವ ಭಾರತ ಮೂಲದ ಝಾರಾ ಪಟೇಲ್ ಲಿಫ್ಟ್‌ಗೆ ಪ್ರವೇಶ ಮಾಡುತ್ತಿರುವ ವಿಡಿಯೋಗೆ ನಟಿ ರಶ್ಮಿಕಾ ಮಂದಣ್ಣ ಅವರ ಮುಖ ಜೋಡಿಸಿರುವ ವಿಡಿಯೋ ಒಂದನ್ನು ಹರಿಬಿಡಲಾಗಿತ್ತು.

ಡೀಪ್‌ಫೇಕ್ ವಿಡಿಯೊಗಳ ಬಗ್ಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಆತಂಕ ವ್ಯಕ್ತಪಡಿಸಿದ್ದರು. ಇಂತಹ ಕೃತ್ಯಗಳನ್ನು ತಡೆಯಲು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕಠಿಣ ನಿಯಮಗಳನ್ನು ಜಾರಿಗೆ ತರಲಾಗುವುದು ಎಂದು ಹೇಳಿದ್ದರು. ಈ ಘಟನೆ ಬಳಿಕ ನಟಿ ಕತ್ರಿನಾ ಕೈಫ್‌, ಸಾರಾ ತೆಂಡಲ್ಕೂರ್‌ ಸೇರಿದಂತೆ ಹಲವು ಸೆಲೆಬ್ರಿಟಿಗಳ  ಡೀಪ್‌ಫೇಕ್ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.