ಮುಂಬೈ: ಬಾಲಿವುಡ್ ನಟಿ ಮಮತಾ ಕುಲಕರ್ಣಿ(Mamta Kulkarni) ಅವರು ಕರಣ್ ಅರ್ಜುನ್, ಕ್ರಾಂತಿವೀರ್, ವಕ್ತ್ ಹಮಾರಾ ಹೈ, ಆಂದೋಲನ, ಬಾಜಿ ಮುಂತಾದ ಹಲವು ಸಿನಿಮಾಗಳಲ್ಲಿ ನಟಿಸಿ ಇಂಡಸ್ಟ್ರಿಯಲ್ಲಿ ತಮ್ಮದೇ ಐಡೆಂಟಿಟಿ ಸೃಷ್ಟಿಸಿಕೊಂಡಿದ್ದರು. 25 ವರ್ಷಗಳ ನಂತರ ಭಾರತಕ್ಕೆ ಮರಳಿದ ಮಮತಾ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಮಾದಕ ದ್ರವ್ಯ ಕಳ್ಳಸಾಗಣೆದಾರ ವಿಕ್ಕಿ ಗೋಸ್ವಾಮಿಯನ್ನು ಮದುವೆಯಾಗಿದ್ದಾರೆ ಎಂಬ ಊಹಾಪೋಹಗಳಿಗೆ ಪೂರ್ಣವಿರಾಮ ಇಡುವಂತೆ ಮುಕ್ತವಾಗಿ ಮಾತನಾಡಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಮತಾ ಕುಲಕರ್ಣಿ, ತಾನು ಮದುವೆಯಾಗಿಲ್ಲ.. ಒಂಟಿಯಾಗಿದ್ದೇನೆ. ವಿಕ್ಕಿ ಗೋಸ್ವಾಮಿ ನನ್ನ ಗಂಡನಲ್ಲ. ನಾನು ಇನ್ನೂ ಒಂಟಿ, ಯಾರನ್ನು ಮದುವೆಯಾಗಿಲ್ಲ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಂದಿಗೂ ವಿಕ್ಕಿ ಗೋಸ್ವಾಮಿ ಅವರ ಪತ್ನಿಯ ಹೆಸರನ್ನು ಹುಡುಕಿದರೆ ಅದರಲ್ಲಿ ಮಮತಾ ಕುಲಕರ್ಣಿ ಹೆಸರು ಕಾಣುತ್ತದೆ.
ಇಬ್ಬರೂ ಮದುವೆಯಾಗಿದ್ದಾರೆ ಎಂಬ ವರದಿಗಳು ಈ ಹಿಂದೆ ಬಂದಿದ್ದವು. ಆದರೆ ಈ ವದಂತಿ ಬಗ್ಗೆ ಸ್ಪಷ್ಟನೆ ನೀಡಿರುವ ಮಮತಾ ಕುಲಕರ್ಣಿ, ವಿಕ್ಕಿಯೊಂದಿಗೆ ನಾನು ಸಂಬಂಧ ಹೊಂದಿದ್ದೆ, ಆದರೆ ಅದು 4 ವರ್ಷಗಳ ಹಿಂದೆಯೇ ಮುರಿದುಬಿದ್ದಿದೆ. ವಿಕ್ಕಿ ಒಳ್ಳೆಯ ವ್ಯಕ್ತಿ, ಒಳ್ಳೆಯ ಹೃದಯ ಹೊಂದಿದ್ದಾರೆ. ಚಿತ್ರರಂಗದ ಎಲ್ಲರೂ ಅವರ ಬಳಿ ಹೋಗುತ್ತಿದ್ದರು, ಹಾಗಾಗಿ ನಾನೂ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಆದರೆ ಚಿತ್ರರಂಗದಿಂದ ವಿಕ್ಕಿಯನ್ನು ಭೇಟಿಯಾದ ಕೊನೆಯ ವ್ಯಕ್ತಿ ನಾನೇ ಎಂದು ತಿಳಿಸಿದರು.
ಆದರೆ ಅವರ ಸತ್ಯ ತಿಳಿದಾಗ ನಾನು ಅವರನ್ನು ಬಿಟ್ಟುಬಿಟ್ಟೆ. ಅವರು ದುಬೈ ಜೈಲಿನಲ್ಲಿದ್ದರು. ಅವರನ್ನು ಜೈಲಿನಿಂದ ಹೊರತರಲು ನಾನು ಪ್ರಯತ್ನಿಸಿದೆ. ಅವರು 2012ರಲ್ಲಿ ಜೈಲಿನಿಂದ ಹೊರಬಂದರು. ನಾನು ಅವರನ್ನು 2016ರಲ್ಲಿ ಭೇಟಿಯಾದೆ. ಆ ಬಳಿಕ ಮತ್ತೆ ಬಂಧಿಸಲಾಯಿತು ಬಳಿಕ ನಾನು ಅವರನ್ನು ಭೇಟಿಯಾಗಿಲ್ಲ ಎಂದು ಹೇಳಿದರು.
1997ರಲ್ಲಿ 10 ವರ್ಷಗಳ ಕಾಲ ದುಬೈನಲ್ಲಿ ವಿಕ್ಕಿ ಗೋಸ್ವಾಮಿ ಜೈಲು ಸೇರಿದ್ದರು. ಅಕ್ರಮ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಆರೋಪ ಅವರ ಮೇಲಿತ್ತು. ಮಮತಾ ಕುಲಕರ್ಣಿ ಅವರನ್ನು ಜೈಲಿನಲ್ಲಿ ಭೇಟಿಯಾಗುತ್ತಿದ್ದರು ಮತ್ತು ಅವರು ಜೈಲಿನಲ್ಲಿದ್ದಾಗ ಅವರನ್ನು ಮದುವೆಯಾದರು ಎಂದು ವರದಿಗಳಿವೆ. ಮಮತಾ ಕುಲಕರ್ಣಿ ಅವರು ವಿಕ್ಕಿ ಜತೆ ಸೇರಿ ಮಾದಕ ದ್ರವ್ಯ ದಂಧೆಯಲ್ಲಿ ತೊಡಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಸದ್ಯ ಅವರು ನ್ಯಾಯಾಲಯದಿಂದ ಕ್ಲೀನ್ ಚಿಟ್ ಪಡೆದಿದ್ದಾರೆ.(ಏಜೆನ್ಸೀಸ್)