ನ್ಯೂಸ್

ಕಿನ್ನರ ಅಖಾಡದಿಂದ Mamta Kulkarni ಉಚ್ಛಾಟನೆ; ಮುಖ್ಯಸ್ಥರು ನೀಡಿದ ಸ್ಪಷ್ಟನೆ ಹೀಗಿದೆ

ಪ್ರಯಾಗ್​ರಾಜ್​: ಹಾಲಿ ನಡೆಯುತ್ತಿರುವ ಮಹಾಕುಂಭಮೇಳವು ಒಂದಿಲ್ಲೊಂದು ಕಾರಣಕ್ಕೆ ಎಲ್ಲರ ಗಮನ ಸೆಳೆಯುತ್ತಿದ್ದು, ಹೊಸ ವಿಚಾರಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದೆ.  ಪ್ರಮುಖವಾಗಿ ನಾಗಾಸಾಧುಗಳು ಹಾಗೂ ವಿದೇಶಿಗರು ಹೆಚ್ಚು ಗಮನವನ್ನು ಸೆಳೆಯುತ್ತಿದ್ದು, ಖ್ಯಾತ ನಟ-ನಟಿಯರು, ಉನ್ನತ ಹುದ್ದೆಯಲ್ಲಿದ್ದ ವ್ಯಕ್ತಿಗಳು ಕೂಡ ಸನ್ಯಾಸತ್ವವನ್ನು ಸ್ವೀಕರಿಸಿರುವ ವಿಚಾರ ಬೆಳಕಿಗ ಬರುತಿದೆ. 90ರ ದಶಕದಲ್ಲಿ ಬಾಲಿವುಡ್​ನ ಹಾಟ್​ ಬೆಡಗಿ ಎಂದೇ ಖ್ಯಾತಿ ಪಡೆದಿದ್ದ ಮಮತಾ ಕುಲಕರ್ಣಿ (Mamta Kulkarni) ಕೂಡ ಸನ್ಯಾಸತ್ವ ಸ್ವೀಕರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇದೀಗ ನಟಿಯನ್ನು ಕಿನ್ನಾರ ಅಖಾಡದಿಂದ ಉಚ್ಛಾಟನೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಕಿನ್ನರ ಅಖಾಡದ ಸಂಸ್ಥಾಪಕರಾದ ರಿಷಿ ಅಜಯ್​ ದಾಸ್​ ನಟಿ ಮಮತಾ ಕುಲಕರ್ಣಿಯನ್ನು (Mamta Kulkarni) ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದ್ದು, ಈ ಬಗ್ಗೆ ಪ್ರಕಟಣೆ ಮೂಲಕ ಸ್ಪಷ್ಟನೆಯನ್ನು ನೀಡಿದ್ದಾರೆ.  ಮಮತಾ ಕುಲಕರ್ಣಿ ಅವರ ಮೇಲೆ ರಾಜದ್ರೋಹದ ಆರೋಪ ಕೇಳಿ ಬಂದಿದ್ದು, ನನ್ನ ಗಮನಕ್ಕೆ ಬಾರದೆ ಅವರನ್ನು ಅಖಾಡದ ಮಹಾಮಂಡಲೇಶ್ವರಿಯಾಗಿ ನೇಮಿಸಿದ್ದಕ್ಕೆ ಮಮತಾ ಹಾಗೂ ಲಕ್ಷ್ಮೀನಾರಾಯಣ ತ್ರಿಪಾಠಿಯನ್ನು ಕಿನ್ನರ ಅಖಾಡದಿಂದ ಉಚ್ಛಾಟನೆ ಮಾಡುತ್ತಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಜನವರಿ 24ರಂದು ಸನ್ಯಾಸ್ಯತ್ವ ಸ್ವೀಕರಿಸಿದ್ದ ಮಮತಾ ಕುಲಕರ್ಣಿಯನ್ನು (Mamta Kulkarni) ಕಿನ್ನರ ಅಖಾಡದ ಮಹಾಮಂಡಲೇಶ್ವರಿಯಾಗಿ ನೇಮಿಸಲಾಗಿತ್ತು. ಇನ್ನೂ ನಟಿ 90ರ ದಶಕದಲ್ಲಿ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡಿದ್ದರು. 1993ರಲ್ಲಿ ನಟಿ ಮ್ಯಾಗಜಿನ್​ ಒಂದರ ಕವರ್​ಪೇಜ್​ಗೆ ಟಾಪ್‌ಲೆಸ್ ಆಗಿ ಪೋಸ್ ನೀಡುವ ಮೂಲಕ ಸುದ್ದಿಯಾಗಿದ್ದರು. ಇದಾದ ಬಳಿಕ ನಟಿ ಗ್ಯಾಂಗ್​ಸ್ಟರ್​ ಛೋಟಾ ರಾಜನ್​ ಅವರೊಂದಿಗೆ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ವದಂತಿಯು ಬಿಟೌನ್​ ಗಲಿಯಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.

2016ರಲ್ಲಿ ನಟಿ ಮಮತಾ ಹಾಗೂ ಅವರ ಪತಿ ವಿಕ್ಕಿ ಗೋಸ್ವಾಮಿ ವಿರುದ್ಧ ಮಾದಕವಸ್ತು ಕಳ್ಳಸಾಗಣೆ ಆರೋಪ ಕೇಳು ಬಂದಿತ್ತು. 2024ರಲ್ಲಿ ವಿದೇಶದಿಂದ ಭಾರತಕ್ಕೆ ಮರಳಿದ ಮಮತಾ ಸಿನಿಮಾ ಅಥವಾ ಬಿಗ್​ಬಾಸ್​ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗಿತ್ತಾದರು ನಟಿ ಯಾವುದರಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಮಹಾಕುಂಭಮೇಳದಲ್ಲಿ ಸನ್ಯಾಸತ್ವ ಪಡೆಯುವ ಮೂಲಕ ನಟಿ ಸುದ್ದಿಯಾಗಿದ್ದರು.

ಯಾವುದು ಈ ಕಿನ್ನರ ಅಖಾಡ? 

ಕಿನ್ನರ ಅಖಾಡ ಅಥವಾ ಕಿನ್ನರ ಅಖಾರ ಧಾರ್ಮಿಕ ಆಚರಣೆಗಳಲ್ಲಿ ತೊಡಗಿಕೊಂಡಿರುವ ತೃತೀಯ ಲಿಂಗಿಗಳ ಸಂಘವಾಗಿದೆ. 2015 ರಲ್ಲಿ ಪ್ರಾರಂಭವಾದ ಕಿನ್ನರ ಅಖಾಡ ಇದೀಗ ನಟಿ ಮಮತಾ ಕುಲಕರ್ಣಿಯನ್ನು ತಮ್ಮ ಮಹಾಮಂಡಲೇಶ್ವರಿಯನ್ನಾಗಿ ನೇಮಕ ಮಾಡಿದೆ. ಇದೊಂದು ರೀತಿಯ ಧಾರ್ಮಿಕ ಸ್ಥಾನವಾಗಿದ್ದು ಇಂದು (ಜನವರಿ 24) ಪಿಂಡ ಪ್ರಧಾನ ಸೇರಿದಂತೆ ಹಲವು ಧಾರ್ಮಿಕ ಕಾರ್ಯಗಳನ್ನು ಮಮತಾ ಕುಲಕರ್ಣಿ ಅವರಿಂದ ಮಾಡಿಸಿ ಅವರನ್ನು ಕಿನ್ನರ ಅಖಾಡದ ಮಹಾಮಂಡಲೇಶ್ವರಿ ಮಾಡಲಾಯಿತು.