ಕೇರಳ: ಮಾಲಿವುಡ್ನ ಮೆಗಾಸ್ಟಾರ್ ಮಮ್ಮುಟ್ಟಿ ಅಭಿನಯಿಸಲಿರುವ ಮುಂದಿನ ಚಿತ್ರದ ಬಗ್ಗೆ ಇದೀಗ ಹೊಸ ಮಾಹಿತಿಯೊಂದು ಲಭಿಸಿದ್ದು, 'ಬ್ರಹ್ಮಯುಗಂ' ಸಿನಿಮಾದ ಪೂಜಾ ಕಾರ್ಯಕ್ರಮವನ್ನು ನಟ ಮಮ್ಮುಟ್ಟಿ ಅವರೊಂದಿಗೆ ಚಿತ್ರತಂಡ ಇಂದು ನೆರವೇರಿಸಿದೆ. ಈ ಮುಖೇನ ಚಿತ್ರದ ಬಗ್ಗೆ ಅಧಿಕೃತವಾಗಿ ಘೋಷಿಸಿದೆ.
'ಬ್ರಹ್ಮಯುಗಂ' ಎಂಬ ಟೈಟಲ್ನಲ್ಲಿ ಮೂಡಿಬರಲು ಸಜ್ಜಾಗಿರುವ ಈ ಚಿತ್ರವನ್ನು ರಾಹುಲ್ ಸದಾಶಿವನ್ ಬರೆದು ನಿರ್ದೇಶಿಸಲಿದ್ದಾರೆ. ಮಮ್ಮುಟ್ಟಿ ಅಭಿನಯಿಸಲಿರುವ ಚಿತ್ರದ ಅಧಿಕೃತ ಪ್ರಾರಂಭಕ್ಕೆ ಇಂದು ಪೂಜಾ ಕಾರ್ಯಕ್ರಮ ನಡೆಸುವ ಮುಖೇನ ಚಾಲನೆ ನೀಡಲಾಯಿತು. ಸಮಾರಂಭದಲ್ಲಿ ಇಡೀ ಚಿತ್ರತಂಡವೇ ಪಾಲ್ಗೊಂಡಿದ್ದು, ಚಿತ್ರದ ಚಿತ್ರೀಕರಣವನ್ನು ಕೇರಳದ ಹಲವು ಭಾಗಗಳಲ್ಲಿ ನಡೆಸಲು ಇದೀಗ ಮುಂದಾಗಿದೆ.
ಪ್ಯಾನ್ ಇಂಡಿಯಾ ಚಿತ್ರವಾದ 'ಬ್ರಹ್ಮಯುಗಂ' ಹಾರರ್-ಥ್ರಿಲ್ಲರ್ ಜಾನರ್ನಲ್ಲಿ ಮೂಡಿಬರಲಿದ್ದು, ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ತೆರೆ ಕಾಣಲಿದೆ. ಈಗಾಗಲೇ ಚಿತ್ರತಂಡ ಬಿಡುಗಡೆಗೊಳಿಸಿರುವ ಡಾರ್ಕ್ ಥೀಮ್ ಪೋಸ್ಟರ್, ಕಥೆ ಹೇಗಿರಬಹುದು ಎಂಬುದರ ಸಣ್ಣ ಸುಳಿವು ನೀಡಿದಂತಿದೆ.
ಇದನ್ನೂ ಓದಿ: VIDEO | ಅಭಿಮಾನಿಯ ಮಗುವನ್ನು ಎತ್ತಿಕೊಳ್ಳಲು ನಿರಾಕರಿಸಿದ ನಟ ಪವನ್ ಕಲ್ಯಾಣ್; ಫ್ಯಾನ್ಸ್ ಹೇಳಿದ್ದೇನು?
ನೈಟ್ ಶಿಫ್ಟ್ ಸ್ಟುಡಿಯೋಸ್ ಎಲ್ಎಲ್ಪಿ ಮತ್ತು ವೈ ನಾಟ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಚಕ್ರವರ್ತಿ ರಾಮಚಂದ್ರ ಮತ್ತು ಶಶಿಕಾಂತ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸಿನಿಮಾದಲ್ಲಿ ಯಾರೆಲ್ಲಾ ನಟಿಸಲಿದ್ದಾರೆ ಎಂಬುದರ ಮಾಹಿತಿಯನ್ನು ಶೀಘ್ರವೇ ಚಿತ್ರ ತಯಾರಕರು ಅಧಿಕೃತವಾಗಿ ಘೋಷಿಸಲಿದ್ದಾರೆ,(ಏಜೆನ್ಸೀಸ್).