ಕೊಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗಾಳಿ ಬಲವಾಗಿ ಬೀಸಿದೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಬೇಕಿದೆ. ಹೀಗಾಗಿ ವಿವಿಧ ಪಕ್ಷಗಳು ಈಗಾಗಲೇ ಪ್ರಚಾರ ತಂತ್ರಗಳನ್ನು ರೂಪಿಸುತ್ತಿವೆ.
2021ರ ಮೇ ತಿಂಗಳಲ್ಲಿ ವಿಧಾನಸಭಾ ಅವಧಿ ಪೂರ್ಣಗೊಳ್ಳಲಿದೆ. ಇದಕ್ಕಾಗಿ ಬಿಜೆಪಿ ಈಗಾಗಲೇ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಅಭಿಯಾನವನ್ನೇ ಆರಂಭಿಸಿದ್ದು, ಅದಕ್ಕೆ 'ಆರ್ ನೋಯಿ ಮಮತಾ' ಅಂದರೆ ಇನ್ನು ಮಮತಾ ಬೇಕಿಲ್ಲ ಎಂದು ಶೀರ್ಷಿಕೆ ನೀಡಿದೆ. ಸದ್ಯ ಟಿಎಂಸಿ ಹಾಗೂ ಬಿಜೆಪಿ ನಡುವೆಯೇ ಹಣಾಹಣಿ ಎಂಬಂಥ ಸ್ಥಿತಿ ರಾಜ್ಯದಲ್ಲಿದೆ. ಎಡ ಹಾಗೂ ಕಾಂಗ್ರೆಸ್ ಇಲ್ಲಿ ಲೆಕ್ಕಕ್ಕೆ ಇಲ್ಲದಂತಾಗಿವೆ.
ಪರಿಸ್ಥಿತಿ ಹೀಗಿರುವಾಗ ಮಮತಾ ಮೂರನೇ ಸುತ್ತಿನ ಅಧಿಕಾರದ ಮೇಲೆ ಕಣ್ಣಿಟ್ಟಿದ್ದಾರೆ. ಇದಕ್ಕಾಗಿ ಜಿಲ್ಲಾ ಹಾಗೂ ವಿವಿಧ ಘಟಕಗಳ ಪಕ್ಷದ ಮುಖಂಡರ ಸಭೆ ನಡೆಸಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆಸದಂತೆ ವಾರ್ನಿಂಗ್ ನೀಡಿದ್ದಾರೆ.
ಕರೊನಾ, ಅಂಫಾನ್ ಚಂಡಮಾರುತ ಮೊದಲಾದ ಕಾರಣದಿಂದಾಗಿ ರಾಜ್ಯದ ಜನರು ಸಂಕಷ್ಟದಲ್ಲಿದ್ದಾರೆ. ಇವರಿಗಾಗಿ ರಾಜ್ಯ ಸರ್ಕಾರ ಹಲವು ರೀತಿಯಲ್ಲಿ ನೆರವು ನೀಡಿದೆ. ರಾಜ್ಯವನ್ನು ಸಂಕಷ್ಟದಿಂದ ಪಾರು ಮಾಡಲು ಹಲವು ಯೋಜನೆಗಳನ್ನು ರೂಪಿಸಿದೆ. ಇದೆಲ್ಲದರ ಬಗ್ಗೆ ರಾಜ್ಯದ ಪ್ರತಿ ಮನೆ ಬಾಗಿಲಿಗೂ ಹೋಗಿ ಮಾಹಿತಿ ನೀಡಬೇಕಾದ ಜವಾಬ್ದಾರಿ ನಿಮ್ಮದು ಎಂದಿದ್ದಾರೆ.
ಇದನ್ನು ಓದಿ; ಕರೊನಾ ದೂರವಿಟ್ಟು ಬೆಂಗಳೂರಿನಿಂದ 2,000 ಕಿ.ಮೀ ಕಾಲ್ನಡಿಗೆಯಲ್ಲಿ ಮನೆ ತಲುಪಿದ, ಹೊಂಚು ಹಾಕಿದ್ದ ವಿಧಿಯನ್ನು ವಂಚಿಸಲಾಗಲಿಲ್ಲ
ಜತೆಗೆ, ರಾಜ್ಯ ಸರ್ಕಾರ ಸಂಕಷ್ಟ ಪರಿಹಾರಕ್ಕಾಗಿ ಭಾರಿ ಪ್ರಮಾಣದಲ್ಲಿ ಹಣ ಬಿಡುಗಡೆ ಮಾಡಿದೆ. ಜತೆಗೆ, ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಈ ಪರಿಹಾರ ನಿಧಿ ಹಾಗೂ ಯೋಜನೆಗಳಲ್ಲಿ ಟಿಎಂಸಿ ಕಾರ್ಯಕರ್ತರು ದುಬರ್ಳಕೆ ಹಾಗೂ ಭ್ರಷ್ಟಾಚಾರ ಎಸಗಬಾರದು ಎಂದು ಕಟ್ಟಪ್ಪಣೆ ಹೊರಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ಒಂಭತ್ತು ವರ್ಷಗಳ ಸಾಧನೆಯನ್ನು ವ್ಯಾಪಕವಾಗಿ ಬಿಂಬಿಸಬೇಕು ಎಂದು ಹೇಳಿದ್ದಾರೆ.