ನ್ಯೂಸ್

ಐಷಾರಾಮಿ ಬ್ಯೂಟಿ ಬ್ರ್ಯಾಂಡ್‌ಗೆ ಮಾಡೆಲ್‌ ಆದ ಸ್ಲಮ್‌ ಹುಡುಗಿ; ಈಕೆ ಬಗ್ಗೆ ನಿಮಗೆ ಗೊತ್ತಾ?

ಮುಂಬೈ: ಸ್ಟಾರ್​​ ನಟ, ನಟಿಯರನ್ನು ಐಷಾರಾಮಿ ಬ್ರ್ಯಾಂಡ್‌ಗಳು ಮಾಡೆಲ್‌ಗಳನ್ನು ಕಂಪನಿಗಳು ನೇಮಿಸಿಕೊಳ್ಳುತ್ತವೆ. ಆದರೆ ಕೊಳೆಗೇರಿಯಿಂದ(ಸ್ಲಮ್‌) ಬಂದ ಹುಡುಗಿಯನ್ನು ಮಾಡೆಲ್​ ಆಗಿ ಮಾಡಿರುವುದು ಸಖತ್​ ಸುದ್ದಿಯಲ್ಲಿದೆ.

ಸ್ಲಮ್‌ನಲ್ಲಿ ಬೆಳೆದ 14 ವರ್ಷದ ಮಲೀಶಾ ಖರ್ವಾ ಐಷಾರಾಮಿ ಸೌಂದರ್ಯ ಬ್ರ್ಯಾಂಡ್‌ಗೆ ಮಾಡೆಲ್ ಆಗಿದ್ದಾಳೆ. ಪ್ರತಿಷ್ಠಿತ ಬ್ಯೂಟಿ ಬ್ರ್ಯಾಂಡ್‌ ಫಾರೆಸ್ಟ್‌ ಎಸೆನ್ಷಿಯಲ್ಸ್‌ನ 'ಯುವತಿ ಕಲೆಕ್ಷನ್' ಜಾಹೀರಾತಿನಲ್ಲಿ ಮಲೀಶಾ ಖರ್ವಾ ಕಾಣಿಸಿಕೊಂಡಿದ್ದಾಳೆ.

2020ರಲ್ಲಿ ಮುಂಬೈನಲ್ಲಿ ಹಾಲಿವುಡ್ ನಟ ರಾಬರ್ಟ್ ಹಾಫ್‌ಮನ್ ಅವರ ಕಣ್ಣಿಗೆ ಮಲೀಶಾ ಕಾಣಿಸಿಕೊಂಡಿದ್ದಳು. ನಂತರ ಆ ಹುಡುಗಿಗಾಗಿ ಗೋ ಫಂಡ್ ಮಿ ಎಂಬ ಫಂಡ್ ರೈಸಿಂಗ್ ಪೇಜ್‌ ಶುರು ಮಾಡಿದ್ದರು. ಪ್ರಸ್ತುತ ಈ 14 ವರ್ಷ ವಯಸ್ಸಿನ ಮಲೀಶಾ ಇನ್​ಸ್ಟಾಗ್ರಾಮ್​​ನಲ್ಲಿ ಎರಡು ಲಕ್ಷಕ್ಕೂ ಅಧಿಕ ಫಾಲೋವರ್‌ಗಳನ್ನು ಹೊಂದಿದ್ದಾರೆ. ಇವರು ಆಗಾಗ ತಾವು ಹಾಕುವ ಪೋಸ್ಟ್‌ಗಳಿಗೆ #princessfromtheslum ಎಂಬ ಹ್ಯಾಶ್‌ಟ್ಯಾಗ್‌ನ್ನು ಹಾಕುತ್ತಾರೆ. ಇತ್ತೀಚೆಗೆ ಮಲೀಶಾ ಅವರು ಹಲವು ವಸ್ತುಗಳಿಗೆ ಮಾಡೆಲಿಂಗ್ ಮಾಡಿದ್ದು, 'ಲೈವ್ ಯುವರ್ ಫೇರಿಟೇಲ್' ಎಂಬ ಕಿರುಚಿತ್ರದಲ್ಲಿಯೂ ನಟಿಸಿದ್ದಾರೆ.

ಇದೀಗ ಮಲೀಶಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 2.5 ಲಕ್ಷ ಫಾಲೋವರ್ಸ್‌ ಹೊಂದಿದ್ದಾರೆ. ಅಲ್ಲದೇ ಮಾಡೆಲಿಂಗ್‌ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಆಕೆಯ ನಗು ತುಂಬಾ ಚೆನ್ನಾಗಿದೆ. ಇದು ಪ್ರತಿಯೊಬ್ಬ ಜನ ಸಾಮಾನ್ಯನಿಗೆ ಸಂಬಂಧಿಸಿದ ಮುಖವಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಾ ಮೆಚ್ಚುಗೆ ಸೂಚಿಸುತ್ತಿದ್ದಾರೆ.