ಸಾಂದರ್ಭಿಕ ಚಿತ್ರ 
ನ್ಯೂಸ್

ಉಚಿತ ಪ್ರಯಾಣಕ್ಕಾಗಿ ಪುರುಷ ಅಂಗವಿಕಲರ ಕೂಗು

| ಡಿ.ಎಂ. ಮಹೇಶ್ ದಾವಣಗೆರೆ

‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಸಾರಿಗೆ ಬಸ್​ಗಳಲ್ಲಿರುವ ಉಚಿತ ಪ್ರಯಾಣದ ಸೌಲಭ್ಯ ಪುರುಷ ಅಂಗವಿಕಲರಿಗೂ ವಿಸ್ತರಿಸಬೇಕೆಂಬ ಕೂಗು ಕೇಳಿಬಂದಿದೆ.

ರಾಜ್ಯದಲ್ಲಿ 9,49,700 ಅಂಗವಿಕಲರು ಮಾಸಾಶನ ಪಡೆಯುತ್ತಿದ್ದಾರೆ. ಇದರಲ್ಲಿ 3,52,887 (ಶೇ.40ಕ್ಕಿಂತ ಹೆಚ್ಚು ನ್ಯೂನತೆ) ಮಂದಿ 800 ರೂ., 5,19,816 ಜನರು (ಶೇ.75ಕ್ಕಿಂತ ಹೆಚ್ಚು) 1400 ರೂ. ಹಾಗೂ ಮನೋವೈಕಲ್ಯವುಳ್ಳ 76,997 ಜನ 2 ಸಾವಿರ ರೂ.ಗಳ ನೆರವು ಪಡೆಯುತ್ತಿದ್ದಾರೆ.

ಸರ್ಕಾರದ ಅಧಿಕೃತ ಮಾಹಿತಿಯಂತೆ ರಾಜ್ಯದಲ್ಲಿ 10,02,237 ಅಂಗವಿಕಲರಿದ್ದಾರೆ. ಇದರಲ್ಲಿ 6,42,975 ಪುರುಷರು, 3,59,262 ಮಹಿಳೆಯರು. ವಿಶೇಷ ಗುರುತಿನ ಚೀಟಿಯನ್ನು ಬಹುತೇಕರು ಪಡೆದಿಲ್ಲ. ಅಂಧರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಇತರ ಅಂಗವಿಕಲರು ಬಸ್​ಪಾಸ್ ಪ್ರದರ್ಶಿಸಿ 100 ಕಿ.ಮೀ. ಮಿತಿಯಲ್ಲಿ ಸಂಚರಿಸಬಹುದು. ಆದರೆ, ವಾರ್ಷಿಕವಾಗಿ 660 ರೂ. ಫಲಾನುಭವಿ ಕಟ್ಟಬೇಕಿದೆ. ಅಂಗವಿಕಲರು ಓಡಾಡಿದ ಪ್ರಮಾಣ ಗುರುತಿಸಲು ಎಟಿಎಂ ಮಾದರಿ ಕಾರ್ಡ್ ನೀಡಿದರೆ ಕೆಎಸ್​ಆರ್​ಟಿಸಿಗೆ ಖಚಿತ ಬಳಕೆ ಲೆಕ್ಕ ಸಿಗಲಿದೆ ಎಂಬುದಾಗಿ ರಾಜ್ಯ ವಿಕಲಚೇತನರ ರಕ್ಷಣಾ ಸಂಸ್ಥೆ ಅಂಗವಿಕಲರ ನಿರ್ದೇಶನಾಲಯಕ್ಕೆ ಪ್ರಸ್ತಾವ ಸಲ್ಲಿಸಿದೆ. ಪಾಸ್​ನ ಪ್ರಯಾಣ ಮಿತಿ ಹೆಚ್ಚಿಸಲು ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.

ಬಸ್​ಪಾಸ್ ಶುಲ್ಕದಲ್ಲಿ ಫಲಾನುಭವಿ-ಕೆಎಸ್​ಆರ್​ಟಿಸಿ ತಲಾ ಶೇ.25 ಹಣ ಭರಿಸಲಿವೆ. ಶೇ.50 ಹಣ ಸರ್ಕಾರವೇ ನೀಡುತ್ತಿದೆ. ಒಬ್ಬ ಅಂಗವಿಕಲ ದಿನಕ್ಕೆ 200 ಕಿಮೀ ಓಡಾಡಿದರೂ ವರ್ಷಕ್ಕೆ 72 ಸಾವಿರ ಕಿ.ಮೀ. ಕ್ರಮಿಸಬಹುದು. ಅಂಗವಿಕಲರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದರೆ ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗದು. | ಚಂದ್ರಶೇಖರ ಪುಟ್ಟಪ್ಪ ರಾಜ್ಯ ವಿಕಲಚೇತನರ ರಕ್ಷಣಾ ಸಮಿತಿ ಕಾರ್ಯಾಧ್ಯಕ್ಷ

ಎಸ್​ಎಂಕೆ ಸರ್ಕಾರದಲ್ಲಿ ಉಚಿತ

ಎಸ್.ಎಂ. ಕೃಷ್ಣ ಸರ್ಕಾರದಲ್ಲಿ (2003) ಎಲ್ಲ ವಿಕಲಾಂಗರಿಗೂ ಉಚಿತ ಪ್ರಯಾಣ ಕಲ್ಪಿಸಿದ್ದು ನಂತರದಲ್ಲಿ ಸ್ಥಗಿತವಾಗಿತ್ತು. ಈಗಿನ ಸರ್ಕಾರದಲ್ಲಿ ಮಹಿಳಾ ಅಂಗವಿಕಲರಿಗೂ ಉಚಿತ ಪ್ರಯಾಣದ ಅವಕಾಶವಾಗಿದೆ. ಇದನ್ನು ನಮಗೂ ಕಲ್ಪಿಸಿದರೆ ಉನ್ನತ ಚಿಕಿತ್ಸೆ, ಕೆಲಸಕ್ಕೆ ಹೋಗಿಬರಲು ಅನುಕೂಲ ಎನ್ನುತ್ತಾರೆ ಪುರುಷ ಅಂಗವಿಕಲರು. ಉಚಿತ ಪ್ರಯಾಣ ಕಲ್ಪಿಸದಿದ್ದರೂ ಪಾಸ್ ಮೂಲಕ ಪ್ರಯಾಣದ ಮಿತಿಯನ್ನು ಕನಿಷ್ಟ 250 ಕಿ.ಮೀ. ವರೆಗಾದರೂ ಹೆಚ್ಚಿಸಬೇಕು. ಬಸ್​ಪಾಸ್ ಕಳೆದಲ್ಲಿ, ನವೀಕರಿಸಬೇಕಿದ್ದಲ್ಲಿ ಪೋರ್ಟಲ್ ಮೂಲಕ 660 ರೂ.ಗಳ ಮರು ಶುಲ್ಕ ಪಡೆಯುವ ವ್ಯವಸ್ಥೆ ಬದಲಾಗಬೇಕೆಂಬ ಮನವಿ ಕೆಲವರದು.