ನವದೆಹಲಿ: ಕರೊನಾ ಸಂಕಷ್ಟಕ್ಕೆ ಆದಷ್ಟು ಬೇಗ ಪರಿಹಾರ ಸಿಗಲಿದೆ ಎಂದು ತಜ್ಞರು ಭರವಸೆ ನೀಡುತ್ತಿರುವ ಬೆನ್ನಲ್ಲೇ ಈ ವೈರಸ್ ಇನ್ನಷ್ಟು ವಿರಾಟ್ ರೂಪಗಳನ್ನು ಪ್ರದರ್ಶಿಸುತ್ತಿದೆ.
ಭಾರತದಲ್ಲಿ ಕಂಡು ಬರುತ್ತಿರುವ ವೈರಸ್ ಉಳಿದಡೆಯ ವೈರಸ್ಗಳಿಗೆ ಹೋಲಿಸಿದಲ್ಲಿ ಅಷ್ಟೊಂದು ಮಾರಕವಲ್ಲ, ಎಂದೇ ಹೇಳಲಾಗಿತ್ತು. ಆದರೆ, ಭಾರತದಲ್ಲಿ ಪ್ರತಿದಿನ ಕಂಡುಬರುತ್ತಿರುವ ರೋಗಿಗಳ ಸಂಖ್ಯೆ ಅಮೆರಿಕ ಬ್ರೆಜಿಲ್ಗಿಂತಲೂ ಹೆಚ್ಚಾಗಿದೆ. ಕರೊನಾ ಈ ಮಟ್ಟಿಗೆ ಕ್ಷಿಪ್ರದಾಳಿ ನಡೆಸುತ್ತಿರುವುದಾದರೂ ಏಕೆ ಎಂಬುದು ಅಚ್ಚರಿಗೆ ಕಾರಣವಾಗಿದೆ.
ಇದನ್ನೂ ಓದಿ; ಸೌದಿ ಅರೇಬಿಯಾದಲ್ಲಿ ಉತ್ಪಾದನೆಯಾಗಲಿದೆ ರಷ್ಯನ್ ಕರೊನಾ ಲಸಿಕೆ; ಫಿಲಿಫೈನ್ಸ್, ಬ್ರೆಜಿಲ್ನಲ್ಲೂ ಕ್ಲಿನಿಕಲ್ ಟ್ರಯಲ್
ಈ ನಡುವೆ ಮಲೇಷ್ಯಾದಿಂದ ಬಂದಿರುವ ವರದಿ ಇನ್ನಷ್ಟು ಭೀತಿ ಮೂಡಿಸಿದೆ. ಕರೊನಾ ವೈರಸ್ನ ಹೊಸ ಅವತರಣಿಕೆ ಅಥವಾ ರೂಪಾಂತರವೊಂದು ಕಂಡುಬಂದಿದ್ದು, ಅದನ್ನು 'D614G' ಎಂದು ಕರೆಯಲಾಗಿದೆ. ಇದು ಹಾಲಿ ಕಂಡುಬರುತ್ತಿರುವ ವೈರಸ್ ರೂಪಾಂತರಕ್ಕಿಂತ ಹತ್ತು ಪಟ್ಟು ಹೆಚ್ಚು ಮಾರಕ ಎಂದು ಮಲೇಷ್ಯಾದ ಆರೋಗ್ಯ ಮಹಾನಿರ್ದೇಶಕ ನೂರ್ ಹಿಷಾಮ್ ಅಬ್ದುಲ್ಲಾ ಹೇಳಿದ್ದಾರೆ.
ಅಲ್ಲಿನ ರೆಸ್ಟೋರಂಟ್ ಮಾಲೀಕನೊಬ್ಬನಿಂದ ಹರಡಿದ ಸೋಂಕಿನಲ್ಲಿ ಈ ವೈರಸ್ ಕಂಡುಬಂದಿದೆ. ಆತನ ಹಾಗೂ ಆತನ ಸಂಪರ್ಕದಲ್ಲಿದ್ದವರಲ್ಲೂ ಈ ವೈರಸ್ ಪತ್ತೆಯಾಗಿದೆ. ಆತಂಕದ ವಿಷಯವೆಂದರೆ, ರೆಸ್ಟೋರಂಟ್ ಮಾಲೀಕ ಭಾರತ ಭೇಟಿ ನೀಡಿ ಮಲೇಷ್ಯಾಗೆ ತೆರಳಿದಾಗ ಸೋಂಕು ಇರುವುದು ಗೊತ್ತಾಗಿದೆ. ಹೀಗಾಗಿ ಈ ವೈರಸ್ ಕುರುಹು ಭಾರತದಿಂದಲೇ ಹಬ್ಬಿರಬಹುದೇ ಎಂಬ ಕಳವಳವೂ ವ್ಯಕ್ತವಾಗಿದೆ.
ಇದಷ್ಟೇ ಅಲ್ಲದೇ, ಫಿಲಿಫೈನ್ಸ್ನಿಂದ ಬಂದ ಮೂವರು ಇಂಥದ್ದೇ ವೈರಸ್ನ ಕುರುಹುಗಳು ಕಂಡುಬಂದಿವೆ ಎಂದು ಹೇಳಲಾಗಿದೆ. ಇದು ಆರಂಭಿಕ ಪರೀಕ್ಷೆಯಲ್ಲಿ ಗೊತ್ತಾದ ಫಲಿತಾಂಶವಾಗಿದೆ. ಇನ್ನೂ ಬಹಳಷ್ಟು ಪ್ರಕರಣಗಳಲ್ಲಿ ಪರೀಕ್ಷೆಗಳು ನಡೆಯಬೇಕಿವೆ ಎಂದು ಅಬ್ದುಲ್ಲಾ ಹೇಳಿದ್ದಾರೆ.