ನ್ಯೂಸ್

ಅಮೆರಿಕದಲ್ಲಿದ್ದ ಪುತ್ರಿಗೆ ಕರೆ ಮಾಡಿದ ತಾಯಿಗೆ ಕಾದಿತ್ತು ದೊಡ್ಡ ಆಘಾತ​! ಒಂದೇ ಕೋಣೆಯಲ್ಲಿ ಭೀಕರ ದೃಶ್ಯ

ಕೊಲ್ಲಂ: ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರು ದುರಂತ ಸಾವಿಗೀಡಾಗಿರುವ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.

ಮೃತರನ್ನು ಆನಂದ್​ ಸುಜಿತ್​ ಹೆನ್ರಿ (38), ಆತನ ಪತ್ನಿ ಅಲೈಸ್​ ಪ್ರಿಯಾಂಕಾ (37), ಇಬ್ಬರು ಮಕ್ಕಳಾದ ನೋಹ್​ (4) ಮತ್ತು ನ್ಯಾಥನ್​ (4) ಎಂದು ಗುರುತಿಸಲಾಗಿದೆ. ಆನಂದ್ ಅವರು ಕೊಲ್ಲಂನ ಫಾತಿಮಾ ಮಾತಾ ನ್ಯಾಷನಲ್ ಕಾಲೇಜಿನ ಮಾಜಿ ಪ್ರಾಂಶುಪಾಲರಾಗಿದ್ದ ಪಟ್ಟಠಾಣಂ ಮೂಲದ ಜಿ ಹೆನ್ರಿ ಮತ್ತು ಶಾಂತಮ್ಮ ಅವರ ಕಿರಿಯ ಪುತ್ರ.

ಎಸಿ ಅಥವಾ ವಾಟರ್​ ಹೀಟರ್​ನ ವಿಷಕಾರಿ ಅನಿಲವನ್ನು ಸೇವಿಸಿ ಸಾವು ಸಂಭವಿಸಿರಬಹುದೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಮೆರಿಕದ ಕಾಲಮಾನ ಸೋಮವಾರ ಬೆಳಗ್ಗೆ 9.15ಕ್ಕೆ ಸ್ಯಾನ್ ಮಾಟಿಯೊದಲ್ಲಿರುವ ಮನೆಯೊಳಗಿನ ಕೋಣೆಯಲ್ಲಿ ನಾಲ್ವರ ಶವಗಳು ಪತ್ತೆಯಾಗಿವೆ.

ಅಲೈಸ್​ ಪ್ರಿಯಾಂಕಾಗೆ ಅವರ ತಾಯಿ ಎಷ್ಟೇ ಕರೆ ಮಾಡಿದರೂ ಸ್ವೀಕರಿಸದಿದ್ದಾಗ ಅಮೆರಿದಲ್ಲೇ ಇರುವ ಮತ್ತೊಬ್ಬ ಸಂಬಂಧಿಗೆ ತಾಯಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಸಂಬಂಧಿ, ಪ್ರಿಯಾಂಕಾ ಮನೆಗೆ ಭೇಟಿ ನೀಡಿದರು. ಸಾಕಷ್ಟು ಬಾರಿ ಬಾಗಿಲು ಬಡಿದಾಗ ಯಾರೂ ಪ್ರತಿಕ್ರಿಯಿಸದಿದ್ದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು.

ಪೊಲೀಸರ ಸಮ್ಮುಖದಲ್ಲಿ ಬಾಗಿಲು ತೆರೆದು ನೋಡಿದಾಗ ನಾಲ್ವರ ಶವಗಳು ಪತ್ತೆಯಾಗಿವೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ ಸಾವಿಗೆ ಕಾರಣ ತಿಳಿಯಲಿದೆ. ಘಟನೆಯ ತನಿಖೆ ಪ್ರಗತಿಯಲ್ಲಿದೆ ಎಂದು ಸ್ಯಾನ್ ಮಾಟಿಯೊ ಪೊಲೀಸರು ತಿಳಿಸಿದ್ದಾರೆ.

ಆನಂದ್ ಮತ್ತು ಆಲಿಸ್ ಒಂಬತ್ತು ವರ್ಷಗಳಿಂದ ಕ್ಯಾಲಿಫೋರ್ನಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಆನಂದ್ ಸಾಫ್ಟ್‌ವೇರ್ ಇಂಜಿನಿಯರ್ ಮತ್ತು ಆಲಿಸ್ ಪ್ರಿಯಾಂಕಾ ಹಿರಿಯ ವಿಶ್ಲೇಷಕರಾಗಿದ್ದರು. ಎಂಟು ವರ್ಷಗಳ ಹಿಂದೆ ಕೊನೆಯದಾಗಿ ತಮ್ಮ ಊರಿಗೆ ಬಂದಿದ್ದರು. (ಏಜೆನ್ಸೀಸ್​)