ನ್ಯೂಸ್

ಮಹಿಳೆಯರಿಗೆ ಹಿಜಾಬ್​ ಕಡ್ಡಾಯ ಮಾಡಿರುವ ತಾಲಿಬಾನ್​​ ನೀತಿಗೆ ಮಲಾಲ ವಿರೋಧ

ಲಂಡನ್​: ಭಯೊತ್ಪಾದಕತೆ ವಿರುದ್ಧ ಹೋರಾಟ ನಡೆಸಿ, ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದ ಪಾಕಿಸ್ತಾನ ಮೂಲದ ನೊಬೆಲ್​ ಪ್ರಶಸ್ತಿ ಪುರಸ್ಕೃತೆ ಮಲಾಲ ಯೂಸಫ್​​ಝಾಯ್​ ಸದ್ಯ ತಾಲಿಬಾನ್​ ನೀತಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ಹಿಜಾಬ್​ ಕಡ್ಡಾಯಗೊಳಿಸಿ ತಾಲಿಬಾನ್​ ಆದೇಶ ಹೊರಡಿಸಿತ್ತು. ಈ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಲಾಲ ಇದು ಮಹಿಳೆಯರನ್ನು ಕೆಲಸದಿಂದ ದೂರವಿಡಲು ಈ ತಂತ್ರ ರೂಪಿಸಲಾಗಿದೆ ಎಂದು ಹೇಳಿದ್ದಾರೆ.

ತಾಲಿಬಾನ್​ , ಅಫ್ಘಾನಿಸ್ತಾನದ ಮಹಿಳೆಯರನ್ನು ಸಾರ್ವಜನಿಕ ಜೀವನದಿಂದ ಅಳಿಸಲು ಹೊರಟಿದೆ. ಹೆಣ್ಣು ಮಕ್ಕಳನ್ನು ಶಾಲೆಯಿಂದ ಹೊರಗಿಡಲು ಹಾಗೂ ಮಹಿಳೆಯರನ್ನು ಕೆಲಸದಿಂದ ದೂರವಿಡಲು ಒಟ್ಟಾರೆ ಸಂಪೂರ್ಣವಾಗಿ ಮಹಿಳೆಯರನ್ನು ಅಳಿಸಿಹಾಕಲು ಈ ನಿಯಮ  ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಅಫ್ಘಾನಿಸ್ತಾನದಲ್ಲಿ ಕುಟುಂಬದ ಪುರುಷರಿಲ್ಲದೇ ಮಹಿಳೆಯರು ಎಲ್ಲೂ ಪ್ರಯಾಣಿಸುವಂತೆಯೂ ಇಲ್ಲ, ಮನೆಯಿಂದ ಹೊರಬಂದಾಗ ಸಂಪೂರ್ಣವಾಗಿ ತಮ್ಮ ಮುಖ ಸೇರಿದಂತೆ ದೇಹವನ್ನು ಮುಚ್ಚಬೇಕೆಂಬ ಕಠಿಣ ನೀತಿಯನ್ನು ತಾಲಿಬಾನ್​ ಸರ್ಕಾರ ಜಾರಿಗೊಳಿಸಿದೆ.

ಪಾಕಿಸ್ತಾನದಲ್ಲಿ ಭಯೋತ್ಪಾದಕತೆ ವಿರುದ್ಧ ಹೋರಾಡಿ, ಭಯೋತ್ಪಾದಕರಿಂದ ಹಲ್ಲೆಗೊಳಗಾದ ಬಳಿಕ ಹೆಣ್ಣುಮಕ್ಕಳ ಪರ ಹೋರಾಟಗಾರ್ತಿ ಮಲಾಲ ಸದ್ಯ ಲಂಡನ್​ನಲ್ಲಿ ನೆಲೆಸಿದ್ದಾರೆ. (ಏಜೆನ್ಸೀಸ್​)